ʼಮೇಕೆದಾಟುʼಗೆ ತಮಿಳುನಾಡು ಸರಕಾರವನ್ನು ಒಪ್ಪಿಸುವ ಶಕ್ತಿ ರಾಜ್ಯ ಕಾಂಗ್ರೆಸ್ಗೆ ಇಲ್ಲ : ಎಚ್.ಡಿ.ಕುಮಾರಸ್ವಾಮಿ

ಎಚ್.ಡಿ.ಕುಮಾರಸ್ವಾಮಿ
ಮೈಸೂರು : ಮೇಕೆದಾಟು ಯೋಜನೆ ಬಗ್ಗೆ ಸುಮ್ಮನೆ ಮಾತಿನಲ್ಲಿ ಕಾಲಹರಣ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ, ತಮಿಳುನಾಡಿನ ಸರಕಾರವನ್ನು ಒಪ್ಪಿಸುವ ಶಕ್ತಿ ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮೈಸೂರಿನಲ್ಲಿ ಶನಿವಾರ ದಿಶಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಶಕ್ತಿ ಇದ್ದರೆ, ತಮಿಳುನಾಡಿನ ತನ್ನ ಮೈತ್ರಿ ಪಕ್ಷವನ್ನು ಮೇಕೆದಾಟು ಯೋಜನೆಗೆ ಒಪ್ಪಿಸಲಿ. ನಾನು ಐದೇ ನಿಮಿಷದಲ್ಲಿ ಈ ಯೋಜನೆಗೆ ಪ್ರಧಾನಮಂತ್ರಿಗಳ ಒಪ್ಪಿಗೆ ಕೊಡಿಸುತ್ತೇನೆ. ಚುನಾವಣೆ ಸಂದರ್ಭದಲ್ಲಿ ಹೇಳಿದ್ದ ನನ್ನ ಈ ಮಾತಿಗೆ ನಾನು ಈಗಲೂ ಬದ್ಧವಾಗಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ನವರಿಗೆ ಮಿತ್ರಪಕ್ಷದ ಮುಲಾಜು ಇದೆ. ಅವರಿಗೆ ತಮಿಳುನಾಡು ಸರಕಾರವನ್ನು ಒಪ್ಪಿಸುವ ಶಕ್ತಿ ಇಲ್ಲ. ಡಿಎಂಕೆ ಪಕ್ಷವನ್ನು ಎದುರು ಹಾಕಿಕೊಳ್ಳುವ ಅಥವಾ ಅವರನ್ನು ಧಿಕ್ಕರಿಸುವ ಶಕ್ತಿಯೂ ಇಲ್ಲ ಎಂದು ಹೇಳಿದರು.
ಮೇಕೆದಾಟು ಯೋಜನೆ ಕಾಂಗ್ರೆಸ್ ಕೈಯಲ್ಲಿ ಸಾಧ್ಯ ಆಗುವುದಿಲ್ಲ. ತಮಿಳುನಾಡು ಸರಕಾರವನ್ನೇ ಒಪ್ಪಿಸದೆ ಮೇಕೆದಾಟು ಯೋಜನೆ ಕಚೇರಿ ತೆರೆದರೆ ಏನು ಪ್ರಯೋಜನ? ಮೇಕೆದಾಟು ಮಾಡುತ್ತೇವೆ ಎಂದು ಹೇಳಿದವರು ಕಾಂಗ್ರೆಸ್ ನವರು, ನಾನಲ್ಲ. ಯೋಜನೆ ಮಾಡುತ್ತೇವೆ ಎಂದು ಹೇಳಿದವರು ಮಾಡಬೇಕು ತಾನೇ? ಮೇಕೆದಾಟು ಹೆಸರಿನಲ್ಲಿ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದರಲ್ಲ, ಎರಡೂವರೆ ವರ್ಷದಿಂದ ಸುಮ್ಮನೆ ಸಮಯ ಹಾಳು ಮಾಡುತ್ತಿದ್ದಾರೆ ಅಷ್ಟೇ. ಸುಮ್ಮನೆ ನನ್ನ ಮೇಲೆ ಜವಾಬ್ದಾರಿ ಹೊರಿಸಿದರೆ, ನಾನು ಹೇಗೆ ಮಾಡಲು ಸಾಧ್ಯ? ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ನನ್ನ ಭಯವಿದೆ:
ಕಾಂಗ್ರೆಸ್ ಪಕ್ಷದವರಿಗೆ ಜನರ ಕೆಲಸ ಮಾಡುವುದು ಬಿಟ್ಟು ರಾಜಕೀಯ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಇದೆ. ಕಾಂಗ್ರೆಸ್ ಪಕ್ಷಕ್ಕೆ ನನ್ನನ್ನು ಕಂಡರೆ ಭಯ. ನನ್ನೊಬ್ಬನ ಮೇಲೆಯೇ ಆ ಪಕ್ಷಕ್ಕೆ ಅತಿಯಾದ ಭಯವಿದೆ. ಈಗಾಗಿ ಪದೇ ಪದೇ ಕಾಂಗ್ರೆಸ್ ಮುಖಂಡರು ನನ್ನ ಹೆಸರನ್ನು ಜಪ ಮಾಡುತ್ತಿರುತ್ತಾರೆ. ಬಿಜೆಪಿ-ಜೆಡಿಎಸ್ ಜೊತೆಯಾದ ಮೇಲಂತೂ ಕಾಂಗ್ರೆಸ್ ನಾಯಕರಿಗೆ ನಿದ್ದೆಯೇ ಬರುತ್ತಿಲ್ಲ. ಹೀಗಾಗಿ ನನ್ನ ಮೇಲೆ ಪದೇ ಪದೇ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಆರೆಸ್ಸೆಸ್ ಬಂದ್ ಮಾಡುವುದಿರಲಿ, ಕಾಂಗ್ರೆಸ್ ಪಕ್ಷವೇ ಎಲ್ಲಾ ಕಡೆ ಬಂದ್ ಆಗುತ್ತಿದೆ :
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ದ ಬಗ್ಗೆ ಟೀಕೆ ಮಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲ್ಯಾಣ ಕರ್ನಾಟಕಕ್ಕೆ ಏನು ಮಾಡಿದ್ದೇನೆ ಎಂಬುದನ್ನು ಮೊದಲು ಹೇಳಲಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂಘದ ಬಗ್ಗೆ ಮಾತನಾಡಿ ಬಾಯಿ ಚಪಲ ತೀರಿಸಿಕೊಳ್ಳುವ ಬದಲು 40 ವರ್ಷದಿಂದ ಕಲ್ಯಾಣ ಕರ್ನಾಟಕಕ್ಕೆ ಏನು ಮಾಡಿದ್ದೇವೆ ಎಂಬುದನ್ನು ಮೊದಲು ಹೇಳಲಿ. ಆರೆಸ್ಸೆಸ್ ಅನ್ನು ಬಂದ್ ಮಾಡುವುದಿರಲಿ, ಈಗ ಕಾಂಗ್ರೆಸ್ ಪಕ್ಷವೇ ಎಲ್ಲಾ ಕಡೆ ಬಂದ್ ಆಗುತ್ತಿದೆ. ಜನರೇ ಬಹುತೇಕ ಕಡೆ ಕಾಂಗ್ರೆಸ್ ಪಕ್ಷವನ್ನು ಬ್ಯಾನ್ ಮಾಡುತ್ತಿದ್ದಾರೆ. ಮೊದಲು ನಿಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಿ ಎಂದು ತಿರುಗೇಟು ನೀಡಿದರು.