KPSC ಅಕ್ರಮ ಮುಚ್ಚಿ ಹಾಕಲು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೊರಟಿದ್ದಾರೆ : ಎಚ್.ಡಿ.ಕುಮಾರಸ್ವಾಮಿ ಆರೋಪ

ಮೈಸೂರು : ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದಾಗ ನಡೆಸಿದ್ದ ಕೆ.ಪಿ.ಎಸ್.ಸಿ ಅಕ್ರಮವನ್ನು ಗೃಹ ಸಚಿವರಾಗಿ ಬಂದು ಮುಚ್ಚಿ ಹಾಕಲು ಪ್ರಿಯಾಂಕ್ ಖರ್ಗೆ ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಆರೋಪ ಮಾಡಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾಗಿದ್ದಾಗ ನಡೆದಿದ್ದ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಗ್ರೇಡ್ 1 ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ವ್ಯಾಪಕ ಅಕ್ರಮ ಎಸೆಗಿದ್ದಾರೆ ಎಂದು ದೂರಿದರು.
ಈ ಅಯ್ಕೆಯ ಸಮಯದಲ್ಲಿ ಇಲಾಖೆ ಮಂತ್ರಿ ಇದ್ದವರು ಯಾರು? ಈ ಅಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮವಾಗಿರುವುದು ಹೊರಗೆ ಬಂದ ಮೇಲೆ ಗೃಹ ಇಲಾಖೆಯೇ ಬೇಕು ಎಂದು ಆ ಇಲಾಖೆಯನ್ನು ಪಡೆದುಕೊಂಡಿದ್ದೀರಿ. ಹಿಂದೆ ಗ್ರಾಮೀಣಾಭಿವೃದ್ಧಿ ಮಂತ್ರಿಯಾಗಿದ್ದಾಗ ಹಗರಣದ ಬಗ್ಗೆ ಯಾಕೆ ಮಾತನಾಡಲಿಲ್ಲ. ತಪ್ಪಿತಸ್ಥರ ವಿರುದ್ಧ ಎಫ್ಐಅರ್ ಯಾಕೆ ಹಾಕಲಿಲ್ಲ? ಅಕ್ರಮ ಆಗಿದೆ ಎಂದು ಫೋರೆನ್ಸಿಕ್ ಲ್ಯಾಬ್ ನಿಂದ ವರದಿ ಬಂದಿದ್ದರೂ ಎಫ್ಐಅರ್ ಹಾಕಲಿಲ್ಲ ಯಾಕೆ? ಎಂದು ಸಚಿವರು ಪ್ರಶ್ನಿಸಿದರು.
ನಿಜಕ್ಕೂ ಈ ದೇಶಕ್ಕೆ ಗಂಡಾಂತರ ಇರುವುದು ಕಾಂಗ್ರೆಸ್ ಪಕ್ಷದಿಂದ :
ಮಾತೆತ್ತಿದರೆ ಆರೆಸ್ಸೆಸ್ ನಿಂದ ದೇಶಕ್ಕೆ ಗಂಡಾಂತರ ಎಂದು ಹೇಳುತ್ತೀರಿ. ನಿಜಕ್ಕೂ ಈ ದೇಶಕ್ಕೆ ಗಂಡಾಂತರ ಇರುವುದು ಕಾಂಗ್ರೆಸ್ ಪಕ್ಷದಿಂದ. ನಮ್ಮ ಸಿದ್ದಾಂತದ ಬಗ್ಗೆ ಮಾತನಾಡುತ್ತೀರಾ? ನಿಮ್ಮ ಸಿದ್ದಾಂತ ನಮಗೆ ಗೊತ್ತಿಲ್ಲವೇ? ತಮಿಳುನಾಡಿನಲ್ಲಿ ಡಿಎಂಕೆ ಬಿಟ್ಟು, ಟಿವಿಕೆ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದ್ದು ನಿಮ್ಮ ಸಿದ್ದಾಂತ? ಎಂದು ವಾಗ್ದಾಳಿ ನಡೆಸಿದ್ದಾರೆ.






