‘ಬರ ನಿರ್ವಹಣೆ’ | ರಾಜ್ಯ ಸರಕಾರ ಕಾಟಾಚಾರಕ್ಕೆ ಕೇಂದ್ರದ ಜತೆ ವ್ಯವಹರಿಸುತ್ತಿದೆ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ರಾಜ್ಯದಲ್ಲಿ ಉಂಟಾಗಿರುವ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಸರಕಾರ, ಇದುವರೆಗೂ ಪ್ರಧಾನಿ, ಗೃಹ ಸಚಿವ ಅಥವಾ ಸಂಬಂಧಿತ ಸಚಿವರನ್ನು ಭೇಟಿಯಾಗದೆ ಕೇಂದ್ರ ಸರಕಾರ ನೆರವು ನೀಡಬೇಕು ಎಂದು ಕಾಟಾಚಾರಕ್ಕೆ ಹೇಳುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಶುಕ್ರವಾರ ವಿಜಯನಗರದಲ್ಲಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ ಕಾರ್ಖಾನೆಯ ಆವರಣದಲ್ಲಿ 71ನೆ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೇಂದ್ರದ ಬಳಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ರಾಜ್ಯ ಸರಕಾರದ ಎರಡು ತಿಂಗಳಿಂದ ಪರಿಹಾರಕ್ಕಾಗಿ ಕೇಂದ್ರಕ್ಕೆ ಕೇವಲ ಪತ್ರಗಳನ್ನು ಬರೆಯುವುದರಲ್ಲಿಯೇ ಕಾಲಹರಣ ಮಾಡುತ್ತಿದೆ ಎಂದು ದೂರಿದರು.
3 ಸಾವಿರ ಕೋಟಿ ರೂ.ಗಳಿಂದ ಆರಂಭಿಸಿ ಇದೀಗ 26ಸಾವಿರ ಕೋಟಿ ರೂ.ಪರಿಹಾರ ಕೇಳುತ್ತಿದ್ದಾರೆ. ಆದರೆ, ಕನಿಷ್ಠ ಸೌಜನ್ಯಕ್ಕಾದರೂ ಸಿಎಂ, ಕಂದಾಯ ಅಥವಾ ಕೃಷಿ ಸಚಿವರಾಗಲಿ ಒಮ್ಮೆಯಾದರೂ ದಿಲ್ಲಿಗೆ ತೆರಳಿ ಪ್ರಧಾನಿ ಅಥವಾ ಗೃಹ ಸಚಿವರನ್ನು ಖುದ್ದಾಗಿ ಭೇಟಿ ಮಾಡಿಲ್ಲ. ಕೇಂದ್ರದ ಮನವೊಲಿಸುವ ಯಾವುದೇ ಪ್ರಯತ್ನ ಮಾಡದೆ ಈಗ ಸರ್ವಪಕ್ಷ ನಿಯೋಗದ ನಾಟಕವಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ತಾವು ಸಿಎಂ ಆಗಿದ್ದ ವೇಳೆ ಇದೇ ರೀತಿಯ ಸಮಸ್ಯೆ ಎದುರಾಗಿತ್ತು, ರೈತರು ಸಂಕಷ್ಟದಲಿದ್ದರು. ಆದರೆ ಆಗ ಕೇಂದ್ರದ ಅನುದಾನಕ್ಕೆ ಕಾಯದೆ, ರಾಜ್ಯದ ಜನತೆಯ ತೆರಿಗೆ ಹಣದಲ್ಲಿ 25ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದೆ. ಅಂದು ನಾನು ಖುದ್ದಾಗಿ ರಾಷ್ಟ್ರಪತಿಗಳನ್ನು ಭೇಟಿಯಾಗಿ ಋಣಮುಕ್ತ ಕಾಯ್ದೆಗೆ ಅಂಕಿತ ಪಡೆದು ತಂದಿದ್ದೆ ಹಾಗೂ ಈಗಿನ ಉಪಮುಖ್ಯಮಂತ್ರಿ ಅಂದಿನ ತಮ್ಮ ಸರಕಾರದಲ್ಲೇ ಇದ್ದರು ಎಂದು ಕುಮಾರಸ್ವಾಮಿ ನೆನಪಿಸಿದರು.
ಉಚಿತ ಯೋಜನೆಗಳ ಹೆಸರಿನಲ್ಲಿ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಿ, ಈಗ ಬಸ್ ಟಿಕೆಟ್ ದರವನ್ನು ಶೇ.33ರಿಂದ 40ರಷ್ಟು ಹೆಚ್ಚಿಸಲು ಹೊರಟಿದ್ದಾರೆ. ಹಾಲಿನ ದರವನ್ನು 8 ರೂ.ಏರಿಕೆ ಮಾಡುತ್ತಿರುವುದು ರೈತರಿಗೆ ನೇರವಾಗಿ ತಲುಪುವುದಾದರೆ ನನ್ನ ಸಂಪೂರ್ಣ ಸ್ವಾಗತವಿದೆ, ಆದರೆ, ವಿಪರೀತವಾಗಿ ಬೆಲೆ ಏರಿಕೆಯಿಂದ ಹಾಲು ಮಾರಾಟವಾಗದೆ, ಭವಿಷ್ಯದಲ್ಲಿ ಖಾಸಗಿ ಡೇರಿಗಳು ಮಾರುಕಟ್ಟೆ ಆಕ್ರಮಿಸಿಕೊಳ್ಳುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.






