Hunsur | ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗ ಬಿದ್ದ PDO: ದಾಳಿ ವೇಳೆ ಕೈ ಕೊಯ್ದುಕೊಂಡರು...

ಮೈಸೂರು : ಬಾಕಿ ಸಂಬಳ ನೀಡಲು ಲಂಚ ಪಡೆದ ಪಿಡಿಓ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ವೇಳೆ ಪಿಡಿಓ ಮಂಜುಳ ತನ್ನ ಕೈಯನ್ನೇ ಚಾಕುವಿನಿಂದ ಕೊಯ್ದುಕೊಂಡು ಹೈಡ್ರಾಮ ಸೃಷ್ಟಿಸಿದ ಘಟನೆ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ.
ಹುಣಸೂರು ತಾಲೂಕು ಮುಳ್ಳೂರು ಗ್ರಾಮ ಪಂಚಾಯಿತಿ ಪಿಡಿಓ ಮಂಜುಳಾ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಅಧಿಕಾರಿ. 25 ಸಾವಿರ ಲಂಚ ಪಡೆದು ಕಚೇರಿಯಲ್ಲೇ ಸಿಕ್ಕಿಬಿದ್ದಿದ್ದಾರೆ.
ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ಸ್ವಾಮಿ ಎಂಬುವರು ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟಿದ್ದಾರೆ. ಅನುಕಂಪದ ಆಧಾರದ ಮೇಲೆ ಸ್ವಾಮಿ ಅವರ ಮಗ ಮಹದೇವ್ ಎಂಬುವರಿಗೆ ಕೆಲಸ ಸಿಕ್ಕಿದೆ. ತಂದೆ ಕರ್ತವ್ಯ ನಿರ್ವಹಿಸಿದ್ದ ಎರಡು ವರ್ಷದ ಸಂಬಳ ಬಾಕಿ ಪಡೆಯಲು ಮಹದೇವ್ ಮುಂದಾಗಿದ್ದಾರೆ. ಸುಮಾರು ನಾಲ್ಕು ಲಕ್ಷ ಸಂಬಳ ನೀಡಲು ಮಂಜುಳ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇದರಿಂದ ಬೇಸತ್ತ ಮಹದೇವ್ ಲೋಕಾಯುಕ್ತ ಮೊರೆ ಹೋಗಿದ್ದಾರೆ. ಮಹದೇವ್ ರಿಂದ 25 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.
ಈ ವೇಳೆ ಮಂಜುಳಾ ತನ್ನ ಕೈಯನ್ನು ಹರಿತವಾದ ಆಯುಧದಿಂದ ಕೊಯ್ದುಕೊಂಡಿದ್ದಾರೆಂದು ಹೇಳಲಾಗಿದೆ. ಗಾಯಗೊಂಡ ಮಂಜುಳಾರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಮುಳ್ಳೂರು ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ವಿಚಾರಣೆ ನಡೆಯುತ್ತಿದೆ.





