ಮೈಸೂರು |ಮೂವರು ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ; ದಾಖಲೆ ಪತ್ರಗಳ ಪರಿಶೀಲನೆ

ಮೈಸೂರು: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮೈಸೂರಿನ ಮೂವರು ಉದ್ಯಮಿಗಳ ಮನೆ ಸೇರಿದಂತೆ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. 10 ಕಾರುಗಳಲ್ಲಿ ಆಗಮಿಸಿದ ಐವತ್ತು ಮಂದಿ ಐಟಿ ಅಧಿಕಾರಿಗಳು ಮತ್ತು ಸಿಬ್ಬಂದಿ ಏಕ ಕಾಲದಲ್ಲಿ ಮೂರು ಕಡೆ ಶೋಧ ಕಾರ್ಯ ನಡೆಸಿದ್ದಾರೆ.
ರಾಮಕೃಷ್ಣನಗರ ಐ-ಬ್ಲಾಕ್‌ನಲ್ಲಿ ಅಮ್ಮ ಕಾಂಪ್ಲೆಕ್ಸ್ ಸಮೀಪವಿರುವ ಪ್ರಥಮ ದರ್ಜೆ ಗುತ್ತಿಗೆದಾರ ಜಯಕೃಷ್ಣ (ರಾಮಕೃಷ್ಣೇಗೌಡ), ಆಲನಹಳ್ಳಿ ರಿಂಗ್ ರಸ್ತೆಯಲ್ಲಿರುವ ಉದ್ಯಮಿ ಕಾಂತರಾಜು, ಹರಿಕುಮಾರ್, ಹರಿಬಾಬು ಹಾಗೂ ವಿಜಯನಗರ 3ನೇ ಹಂತದಲ್ಲಿರುವ ಗುತ್ತಿಗೆದಾರ ರಮೇಶ್ ಮನೆ, ಕಚೇರಿಗಳ ಮೇಲೆ ಬುಧವಾರ ಮುಂಜಾನೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಆಸ್ತಿಗಳ ದಾಖಲೆ-ಪತ್ರ, ಹಣ, ಚಿನ್ನಾಭರಣ ಸೇರಿದಂತೆ ಇತರ ಸ್ಥಿರ-ಚರ, ಆಸ್ತಿಗಳ ವಿವರ ಶೋಧ ನಡೆಸಿದ ಅಧಿಕಾರಿಗಳು ಆಯಾಯ ಕುಟುಂಬ ಸದಸ್ಯರು ಹೊರಗೆ ಹೋಗದಂತೆ ನಿರ್ಬಂಧ ಹಾಕಿ, ಸಂಜೆಯವರೆಗೂ ಕಾರ್ಯಾಚರಣೆ ನಡೆಸಿದರು.
ಎಪ್ರಿಲ್ 1 ರಿಂದ ಈವರೆಗೆ ವಿವಿಧ ಇಲಾಖೆಗಳು, ಸ್ಥಳೀಯ ಸಂಸ್ಥೆಗಳಲ್ಲಿ ಟೆಂಡರ್ ಮೂಲಕ ಕಾಮಗಾರಿಗಳನ್ನು ಪಡೆದು ಪೂರ್ಣಗೊಳಿಸಿ, ಅವುಗಳ ಬಿಲ್ ಪಡೆದಿರುವುದು, ಇನ್ನಿತರ ಮೂಲಗಳಿಂದ ಗಳಿಸಿರುವ ಆದಾಯ, ಬ್ಯಾಂಕ್ ಬ್ಯಾಲೆನ್ಸ್, ಶೇರು ಮಾರುಕಟ್ಟೆಯಲ್ಲಿ ತೊಡಗಿಸಿರುವ ಹಣ, ವಿಮಾ ಕಂಪನಿಗಳಲ್ಲಿ ಹೂಡಿಕೆ ಬಗ್ಗೆಯೂ ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ.
ಸಿವಿಲ್ ಕಾಂಟ್ರಾಕ್ಟ್, ರಿಯಲ್ ಎಸ್ಟೇಟ್, ವಾಣಿಜ್ಯೋದ್ಯಮ ಹಾಗೂ ಇನ್ನಿತರ ವೃತ್ತಿಗಳಲ್ಲಿ ಮಾಡಿರುವ ವಹಿವಾಟುಗಳಿಗೆ ಜಿಎಸ್‌ಟಿ, ಎಸ್‌ಎಸ್‌ಟಿ ಪಾವತಿಸಿರುವ ಕುರಿತಂತೆಯೂ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
ಜಯಕೃಷ್ಣ ಅವರ ರಾಮಕೃಷ್ಣನಗರ ಮನೆ ಹಾಗೂ ಸಮೀಪದ ನಿವೇದಿತಾನಗರದಲ್ಲಿರುವ ಕಚೇರಿ, ಕಾಂತರಾಜು ಅವರಿಗೆ ಸೇರಿದ ದೇವೇಗೌಡ ಸರ್ಕಲ್ ಬಳಿಯ ವರ್ತುಲ ರಸ್ತೆಗೆ ಹೊಂದಿಕೊಂಡಂತಿರುವ ಎಂ-ಪ್ರೋ ಹೋಟೆಲ್, ಸಮೀಪದ ಮಾರುತಿನಗರದಲ್ಲಿರುವ ಮನೆ ಹಾಗೂ ಮಾನಸಿನಗರದ ಕಚೇರಿಗಳಲ್ಲಿ ತಂಡೋಪತಂಡವಾಗಿ ಏಕಕಾಲದಲ್ಲಿ ದಾಳಿ ನಡೆಸಿ, ಆಸ್ತಿಗಳ ದಾಖಲೆ ಪತ್ರಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡರು ಎಂದು ಹೇಳಲಾಗುತ್ತಿದೆ.
ಇಂದು ದಾಳಿ ನಡೆಸಲಾದವರಲ್ಲಿ ಬಹುತೇಕರು ಮೈಸೂರಿನ ಪ್ರತಿಷ್ಠಿತ ರಾಜಕಾರಣಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಂಬಂಧಿಕರು ಎಂದು ಹೇಳಲಾಗುತ್ತಿದೆ. ದಾಳಿ ವೇಳೆ ಐಟಿ ಅಧಿಕಾರಿಗಳು ಕುವೆಂಪುನಗರ, ವಿಜಯನಗರ, ಆಲನಹಳ್ಳಿ ಪೊಲೀಸರ ಸಹಕಾರ ಪಡೆದಿದ್ದರು