ಮೀಸಲಾತಿ ಭಾರತದ ಸಂವಿಧಾನಕ್ಕೆ ವಿರುದ್ಧವಾದದ್ದು, ಮೀಸಲಾತಿ ಮುಂದುವರೆಯಬಾರದು: ನ್ಯಾ.ಸಂತೋಷ ಹೆಗ್ಡೆ

ಮೈಸೂರು: ಮೀಸಲಾತಿ ಭಾರತದ ಸಂವಿಧಾನಕ್ಕೆ ವಿರುದ್ಧವಾದದ್ದು. ಸಂವಿಧಾನದ ವಿಧಿ 14ಕ್ಕೆ ವಿರುದ್ಧವಾಗಿರುವ ಮೀಸಲಾತಿ ವ್ಯವಸ್ಥೆ ಮುಂದುವರಿಯಬಾರದು ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಯೂ ಆದ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ತಾಲೂಕು ಘಟಕದ ಸಹಯೋಗದಲ್ಲಿ ಮಂಗಳವಾರ ನಡೆದ ‘ಸಾರ್ವತ್ರಿಕ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದ ವಿಧಿ 14 ಸಮಾನತೆಯ ಹಕ್ಕನ್ನು ಪ್ರತಿಪಾದಿಸುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಡಾ.ಬಿ.ಆರ್.ಅಂಬೇಡ್ಕರ್, "ನನ್ನ ಸಮುದಾಯಗಳಿಗೆ ಅನ್ಯಾಯವಾಗಿದೆ. ಆ ಸಮುದಾಯಗಳಿಗೆ ನ್ಯಾಯ ಒದಗಿಸಲು ಆರ್ಟಿಕಲ್ 14 ಇದ್ದರೂ 10 ವರ್ಷದ ಸೀಮಿತವಾಗಿ ದಯವಿಟ್ಟು ಮೀಸಲಾತಿ ಕೊಡಬೇಕು" ಎಂದು ಸಂವಿಧಾನದ ಚರ್ಚೆಯ ಸಂದರ್ಭದಲ್ಲಿ ಮನವಿ ಮಾಡಿದ್ದರು. ಆದರೆ, 70 ವರ್ಷಗಳೂ ಕಳೆದರು ಮೀಸಲಾತಿ ಮುಂದುವರಿಯುತ್ತಿದೆ ಎಂದು ಸಂತೋಷ್ ಹೆಗ್ಡೆ ಹೇಳಿದರು.
ಸಮಾಜದಲ್ಲಿ ಯಾವುದೇ ತಾರತಮ್ಯ ಇರಬಾರದು ಎಂಬುದು ಆರ್ಟಿಕಲ್ 14ನ ಉದ್ದೇಶವಾಗಿದೆ. ಮೀಸಲಾತಿಯಿಂದ ಸಮಾಜದ ತಾರತಮ್ಯ ಹೊಗಲಾಡುವುದಿಲ್ಲ. ಮೀಸಲಾತಿಯಿಂದ ತಾರತಮ್ಯ ಹೆಚ್ಚಾಗಲಿದೆ. ಜಾತಿಯ ಆಧಾರದಲ್ಲಿದ್ದ ಮೀಸಲಾತಿ ಈಗ ಲಿಂಗದ ಆಧಾರಕ್ಕೆ ಬಂದು ನಿಂತಿದೆ. ಮುಂದೆ ಎಲ್ಲಿಗೆ ಹೋಗಬಹುದು? ಎಂದು ಪ್ರಶ್ನಿಸಿದರು.
ಸಮಾಜದಲ್ಲಿ ಅವಕಾಶಗಳಿಂದ ತಾರತಮ್ಯವಾಗಿರುವ ಸಮುದಾಯಗಳಿಗೆ ಆರ್ಥಿಕತೆಯ ಆಧಾರದಲ್ಲಿ ಸರಿಪಡಿಸಬೇಕು. ಹಣ ಇಲ್ಲದವರಿಗೆ ವಿದ್ಯೆ ಇಲ್ಲ. ವಿದ್ಯೆ ಇಲ್ಲದೆ ಹುದ್ದೆಗೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಆ ಸಮುದಾಯಗಳು ತಲೆಮಾರುಗಳಿಂದ ಮಾಡುತ್ತಿದ್ದ ಕೆಲಸಗಳನ್ನೆ ಇಂದಿಗೂ ಮಾಡುತ್ತಿದ್ದಾರೆ. ಈ ಮೀಸಲಾತಿ ಅನ್ನುವುದು ಆ ಸಮುದಾಯದಲ್ಲಿ ಆರ್ಥಿಕವಾಗಿ ಮುಂದುವರಿದ ವ್ಯಕ್ತಿಗಳು ಮತ್ತು ಹುದ್ದೆಯಲ್ಲಿರುವ ವ್ಯಕ್ತಿಗಳ ಪಾಲಾಗುತ್ತಿದೆ ಎಂದು ಹೇಳಿದರು.
ಕಷ್ಟಪಟ್ಟು ಓದುವ ಶೇ.1ರಷ್ಟು ಜನರಿಗೆ ಮಾತ್ರ ಮೀಸಲಾತಿ ದೊರೆಯುತ್ತಿದೆ. ಕಷ್ಟಪಟ್ಟು ಓದುವ ವಿದ್ಯಾರ್ಥಿಗಳು ಎಲ್ಲ ಸಮುದಾಯಗಳಲ್ಲಿಯೂ ಇದ್ದಾರೆ. ಹತ್ತು ವರ್ಷ ಮೀಸಲಾತಿ ನೀಡಿದರು. ಆ ಸಮುದಾಯಗಳು ಇನ್ನೂ ಮೇಲೆ ಬರಲು ಸಾಧ್ಯವಾಗಿಲ್ಲ ಎಂದರೆ ಮೀಸಲಾತಿ ತಾರತಮ್ಯ ಸರಿಪಡಿಸುವ ಮಾರ್ಗವಲ್ಲ ಎಂದರು.
ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರಿದ ಕುಟುಂಬಗಳಿಗೂ ಪೀಳಿಗೆಯಿಂದ ಪೀಳಿಗೆ ಮೀಸಲಾತಿಯ ಪ್ರಯೋಜನ ಪಡೆದುಕೊಳ್ಳುತ್ತಿವೆ. ಐಎಎಸ್ ಅಧಿಕಾರಿಗಳು, ನ್ಯಾಯಾಧೀಶರು, ಉದ್ಯಮಿಗಳು ಸೇರಿದಂತೆ ಆರ್ಥಿಕವಾಗಿ ಸದೃಢರಾದವರ ಮಕ್ಕಳಿಗೂ ಮೀಸಲಾತಿಯ ಸೌಲಭ್ಯ ದೊರೆಯುತ್ತಿದೆಯೇ ಹೊರತು ಕಷ್ಟಪಟ್ಟು ಓದುವ ಬಡ ವಿದ್ಯಾರ್ಥಿಗಳಿಗೆ ಅಲ್ಲ ಎಂದು ಹೇಳಿದರು.
ರಾಷ್ಟ್ರಪತಿಗಳ ಮಕ್ಕಳಿಗೆ ಮೀಸಲಾತಿ ಬೇಕೇ? ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಾಧೀಶರ ಮಕ್ಕಳಿಗೆ ಮೀಸಲಾತಿ ಅಗತ್ಯವಿದೆಯೆ? ಆರ್ಥಿಕವಾಗಿ ಮೇಲ್ಮಟ್ಟದಲ್ಲಿರುವ ಕುಟುಂಬಗಳ ಮಕ್ಕಳಿಗೆ ಮತ್ತೆ ಮತ್ತೆ ಮೀಸಲಾತಿ ನೀಡುವುದರಿಂದ ನಿಜವಾದ ಬಡವರಿಗೆ ಅವಕಾಶ ತಪ್ಪುತ್ತದೆ ಎಂದು ಅವರು ಹೇಳಿದರು.
ಮೀಸಲಾತಿ ನೀಡುವುದೇ ಅನಿವಾರ್ಯವೆನಿಸಿದರೆ, ಅದು ಆರ್ಥಿಕವಾಗಿ ಹಿಂದುಳಿದವರ ಆಧಾರದ ಮೇಲೆ ಇರಬೇಕು. ಯಾವುದೇ ಸಮುದಾಯದ ಬಡವರು ಅವಕಾಶದಿಂದ ವಂಚಿತರಾಗಬಾರದು. ಒಂದೇ ಸಮುದಾಯದ ಆರ್ಥಿಕವಾಗಿ ಸದೃಢರಾಗಿರುವವರಿಗೆ ಮೀಸಲಾತಿಯ ಸೌಲಭ್ಯ ಮುಂದುವರಿಸುವ ಬದಲು, ನಿಜವಾಗಿ ನೆರವು ಅಗತ್ಯವಿರುವವರಿಗೆ ಶಿಕ್ಷಣ ಹಾಗೂ ಆರ್ಥಿಕ ನೆರವು ನೀಡಬೇಕು ಎಂದು ಸಲಹೆ ನೀಡಿದರು.
ಮೀಸಲಾತಿಯೊಳಗೆ ಮತ್ತೆ ಒಳಮೀಸಲಾತಿ ಕಲ್ಪಿಸುವ ಪ್ರಕ್ರಿಯೆ ಮುಂದುವರಿದರೆ ಅದು ಮತ್ತಷ್ಟು ವಿಭಜನೆಗೆ ಕಾರಣವಾಗಲಿದೆ. ಈಗಾಗಲೇ ಮೀಸಲಾತಿ ದುರ್ಬಳಕೆಯಾಗುತ್ತಿದೆ. ಒಂದು ವರ್ಗಕ್ಕೆ ಮೀಸಲಾತಿ ನೀಡಿದ ಬಳಿಕ ಮತ್ತೊಂದು ವರ್ಗವೂ ಅದೇ ಬೇಡಿಕೆ ಮುಂದಿಡುವ ಪರಿಸ್ಥಿತಿ ನಿರ್ವಾಣವಾಗುತ್ತಿದೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನು ಸಮಾಜ ಚಿಂತಿಸಬೇಕಾಗಿದೆ. ನೇಮಕಾತಿ, ಬಡ್ತಿ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮೀಸಲಾತಿ ವಿಸ್ತರಿಸುತ್ತಿರುವುದರಿಂದ ಇದರ ಪರಿಣಾಮದ ಕುರಿತು ಗಂಭೀರ ಚರ್ಚೆ ಅಗತ್ಯವಿದೆ ಎಂದು ಹೇಳಿದರು.
ಒಂದು ಕಾಲದಲ್ಲಿ ಆ ಸಮುದಾಯಗಳನ್ನು ವಿದ್ಯೆಯಿಂದ ದೂರವಿಡುತ್ತಿದ್ದರು. ಆದರೆ, ಇಂದು ಆ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಆದರೆ, ಸಂವಿಧಾನ ಆರ್ಟಿಕಲ್ 14 ಯೂಸ್ ಲೆಸ್ ಆಗಿದೆ ಎಂದರು.
ಮಹಿಳೆಯರಿಗೆ ಮೀಸಲಾತಿ ಬೇಕೇ?: ಈ ದೇಶದಲ್ಲಿ ಮಹಿಳೆಯೊಬ್ಬರು 16 ವರ್ಷ ಪ್ರಧಾನ ಮಂತ್ರಿಯಾಗಿದ್ದರು. ಅವರು ಮೀಸಲಾತಿಯಲ್ಲಿ ಬಂದವರಲ್ಲ. ಮಹಿಳೆಯರು ವಿದ್ಯಾವಂತರಾಗಿ ಎಲ್ಲ ವರ್ಗದಲ್ಲಿಯೂ ಇದ್ದಾರೆ. ಚುನಾವಣೆಗಳಲ್ಲಿ ಸ್ಪರ್ಧಿಸಿ ಚುನಾಯಿತರಾಗುತ್ತಿದ್ದಾರೆ. ಮತ್ತೆ ಇಲ್ಲಿಯೂ ಮೀಸಲಾತಿ ತಂದರೆ ಹೇಗೆ? ಎಂದರು.
ಮೀಸಲಾತಿಯನ್ನು ಸಮುದಾಯದ ಆಧಾರದಲ್ಲಿ ನೀಡಬಾರದು. ಶೇಕಡವಾರು ಮೀಸಲಾತಿ ಇರಬಾರದು. ಮೀಸಲಾತಿ ಇರುವುದಿದ್ದರೆ ಎಲ್ಲರಿಗೂ ಮೀಸಲಾತಿ ದೊರೆಯಲಿ. ಬಹಳ ಮುಖ್ಯವಾಗಿ ಮೀಸಲಾತಿಯಿಂದ ತಾರತಮ್ಯವಾಗಲಿದೆ. ಕೆಪಿಟಿಸಿಎಲ್ ಇಂಜಿಯರ್ ಒಬ್ಬರು ರೂ. 70 ಲಕ್ಷ ಕೊಟ್ಟು ಹುದ್ದೆ ಪಡೆದಿದ್ದಾರೆ ಎಂದರೆ ಮೀಸಲಾತಿ ಯಾಕೇ ಬೇಕು. ಭೂ ಲೋಕದಲ್ಲಿ ಇಂಡಿಯಾ-ಪಾಕಿಸ್ತಾನದಲ್ಲಿ ಬಿಟ್ಟರೆ ಎಲ್ಲಿಯೂ ಮೀಸಲಾತಿ ಇಲ್ಲ. ನಾನು ಮೀಸಲಾತಿಯಿಂದ ಹುದ್ದೆಗೇರಲಿಲ್ಲ ಎಂದರು.
ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ಸಂವಿಧಾನದ ವಿಧಿ 14ರ ಆಶಯ ಸಮಾನತೆಯಾದರೂ, ಅದೇ ಸಂವಿಧಾನ ಸಾಮಾಜಿಕವಾಗಿ ಹಿಂದುಳಿದವರಿಗೆ ವಿಶೇಷ ಅವಕಾಶಗಳನ್ನೂ ಕಲ್ಪಿಸಿದೆ. ಆದ್ದರಿಂದ ಮೀಸಲಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಿರಸ್ಕರಿಸುವ ಮೊದಲು ಅದರ ಸಾಮಾಜಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಮಹಿಳೆಯರಿಗೆ ರಾಜಕೀಯ ಮೀಸಲಾತಿ ಅಗತ್ಯ. ಚುನಾವಣಾ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಸಮರ್ಪಕ ಅವಕಾಶ ದೊರೆಯುತ್ತಿಲ್ಲ. ಕುಟುಂಬ ಹಾಗೂ ಸಾಮಾಜಿಕ ಕಾರಣಗಳಿಂದ ಅನೇಕ ಮಹಿಳೆಯರು ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳಾ ಮೀಸಲಾತಿ ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸಲು ನೆರವಾಗಲಿದೆ ಎಂದು ಹೇಳಿದರು.
ಮಹಿಳೆಯರಲ್ಲಿ ನಾಯಕತ್ವದ ಸಾಮರ್ಥ್ಯ ಹೆಚ್ಚಿದೆ. ದೇಶ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಪುರುಷರಿಗಿಂತ ಮಹಿಳೆಯರು ಭ್ರಷ್ಟಾಚಾರಕ್ಕೆ ಸುಲಭವಾಗಿ ಒಳಗಾಗುವುದಿಲ್ಲ. ಸಮಾನತೆ ಮತ್ತು ಸಹಬಾಳ್ವೆಗಾಗಿ ಮಹಿಳೆಯರಿಗೆ ರಾಜಕೀಯ ಮೀಸಲಾತಿ ಅಗತ್ಯ. ಅವಕಾಶವಿದ್ದರೂ ಕುಟುಂಬದ ಪುರುಷರು ಮಹಿಳೆಯರನ್ನು ಚುನಾವಣೆಗೆ ನಿಲ್ಲಲು ಪ್ರೋತ್ಸಾಹಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ಮೀಸಲಾತಿ ಮಹಿಳೆಯರಿಗೆ ವೇದಿಕೆ ಒದಗಿಸಲಿದೆ ಎಂದರು.
ಲಂಚದ ವ್ಯವಸ್ಥೆ ಸರಿಯಾಗದಿದ್ದರೆ ಮೀಸಲಾತಿಯಿಂದ ಪ್ರಯೋಜನವೇನು? ಸರ್ಕಾರಿ ನೇಮಕಾತಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿರುವ ಸಂದರ್ಭದಲ್ಲಿ ಮೀಸಲಾತಿಯ ಕುರಿತು ಮಾತ್ರ ಚರ್ಚಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಕಾವ್ಯಶ್ರೀ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ , ಉಪಾಧ್ಯಕ್ಷ ಜಾಕೀರ್ ಹುಸೇನ್, ಡೈರಿ ವೆಂಕಟೇಶ್, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶಪಾಲರಾದ ಪ್ರೊ.ಎಂ.ಎಸ್.ಅನಿತಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಕಾರ್ಯಕ್ರಮದಲ್ಲಿ ಹಾಜರಿದ್ದರು.






