ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ: ಸಿಎಂ ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಮಾಡಬೇಕು ಎಂಬುದು ನನ್ನ ಪ್ರತಿಷ್ಠೆಯಲ್ಲ, ಪ್ರವಾಸಿಗರನ್ನು ಹೆಚ್ಚು ಹೆಚ್ಚು ಸೆಳೆದು ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಕಂಬಳ ಆಯೋಜನೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಸರಾದಲ್ಲಿ ಹೊಸ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಈಗಿನ ಜನರಿಗೆ ತಕ್ಕಂತೆ ಕಾರ್ಯಕ್ರಮ ಕೊಡಬೇಕು ಎಂದು ಕಂಬಳ ಆಯೋಜನೆ ಮಾಡಲಾಗುತ್ತಿದೆ. ಕಂಬಳ ನನ್ನ ಪ್ರತಿಷ್ಠೆಯಲ್ಲ, ಕಂಬಳ ಆಯೋಜನೆಯಿಂದ ಯಾವ ಪರಿಸರವೂ ನಾಶ ಆಗಲ್ಲ, ಯಾವ ಮರಗಳನ್ನು ತೆರವುಗೊಳಿಸುವುದಿಲ್ಲ, ಆದರೆ ಕೆಲವು ಪರಿಸರವಾದಿಗಳು ಮಾತ್ರ ವಿರೋಧ ಮಾಡುತ್ತಿದ್ದಾರೆ. ನನ್ನಷ್ಟು ಪರಿಸರದ ಮೇಲೆ ಕಾಳಜಿ ಇಟ್ಟವರಿಲ್ಲ. ನಾನು ಪರಿಸರವನ್ನು ಹೇಗೆ ಕಾಪಾಡುತ್ತಿದ್ದೇನೆ ಎಂಬುದನ್ನು ತಿಳಿಸುತ್ತೇನೆ ಎಂದು ಹೇಳಿದರು.
ದಸರಾದಲ್ಲಿ ಹೊಸ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಈಗಿನ ಜನರಿಗೆ ತಕ್ಕಂತೆ ಕಾರ್ಯಕ್ರಮ ಕೊಡಬೇಕು ಎಂಬ ಉದ್ದೇಶ ನನ್ನದು, ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಒಂದೇ ತರಹದ ಹಲವು ಕಾರ್ಯಕ್ರಮಗಳಿಗೆ ಕಡಿವಾಣ ಹಾಕಿ, ರಾಜ್ಯದ ಎಲ್ಲಾ ರೀತಿಯ ಹೊಸ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತೆ ಜಿಲ್ಲಾಧಿಕಾರಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೈಸೂರು ಪ್ರವಾಸಿ ತಾಣ ಇಲ್ಲಿಗೆ ದೇಶ ವಿದೇಶದಿಂದ ಸಾಕಷ್ಟು ಜನರು ಬರುತ್ತಾರೆ. ಹೊಸ ಕಾರ್ಯಕ್ರಮಗಳನ್ನು ನೀಡಿದರೆ ಹೆಚ್ಚು ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದ ಇಲ್ಲಿನ ಹೋಟೆಲ್ ಸೇರಿದಂತೆ ಹಲವು ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಹನೂರು ಶೂಟೌಟ್ ವರದಿ ನಂತರ ಕ್ರಮ:
ಹನೂರು ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಯುತ್ತಿದೆ. ವರದಿ ಬಂದ ನಂತರ ಯಾರು ತಪಿತಸ್ಥರು ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಈಗಾಗಲೆ ಪ್ರಾಥಮಿಕ ವರದಿ ಬಂದಿದೆ. ಈಗ ಸಿಐಡಿಗೆ ವಹಿಸಿದ್ದೇವೆ. ಮ್ಯಾಜಿಸ್ಟ್ರೇಟ್ ತನಿಖೆ ಕೂಡ ಮುಂದುವರಿಯುತ್ತಿದೆ. ಅವರುಗಳು ಕಾಡಿಗೆ ಹೋಗಿದ್ದಾಗ ಸಾಮಾನುಗಳನ್ನು ತೆಗೆದುಕೊಂಡು ಹೋಗಿದ್ದರು ಎಂಬ ಮಾಹಿತಿ ಇದೆ. ಬಹಳ ಹತ್ತಿರದಿಂದ ಶೂಟ್ ಮಾಡಲಾಗಿದೆ ಎಂಬ ವರದಿಯೂ ಬಂದಿದೆ. ಸಂಪೂರ್ಣ ತನಿಖೆ ನಂತರ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಿಜೆಪಿಯವರಿಗೆ ಜನರ ಬದುಕಿಗಿಂತ ರಾಜಕಾರಣ ಮುಖ್ಯ:
ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು ಬಿಜೆಪಿಯವರು ಪಾದಯಾತ್ರೆ ಮಾಡುತ್ತೇವೆ ಎಂದರೆ ಅದು ರಾಜಕೀಯ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಅವರಿಗೆ ಜನರ ಬದುಕು, ಸಮಸ್ಯೆ, ಮುಖ್ಯವಲ್ಲ, ಕಾವೇರಿ ವಿಚಾರ ಯಾವುದರ ಬಗ್ಗೆಯೂ ಚರ್ಚೆ ಮಾಡಲು ಇಷ್ವವಿಲ್ಲ, ಕಾವೇರಿ, ತುಂಗಭದ್ರ ವಿಚಾರದ ಬಗ್ಗೆ ಚರ್ಚಿಸೋಣ ಬನ್ನಿ ಎಂದರು ಬರುತ್ತಿಲ್ಲ ಅವರಿಗೆ ರಾಜಕಾರಣವೇ ಮುಖ್ಯ ಎಂದರು.
ಯಾವ ತಪ್ಪು ಮಾಡದಿದ್ದರು ಒಬ್ಬ ವ್ಯಕ್ತಿಯನ್ನು ಇಟ್ಟುಕೊಂಡು ಆತನನ್ನು ಬಲಿ ತೆಗೆದುಕೊಳ್ಳಲು ಬಿಜೆಪಿಯವರು ಪ್ರಯತ್ನಿಸಿದರು. ಆದರೆ ಪಾಪ ನಾಗೇಂದ್ರ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ಇಂದು ರಾಜ್ಯಪಾಲರಿಗೆ ಕಳುಹಿಸುತ್ತಿದ್ದೇನೆ ಎಂದು ಹೇಳಿದರು.
ಬಿಜೆಪಿಯವರಿಗೆ ನಾನು ಮುಖ್ಯಮಂತ್ರಿ ಆಗಿರುವುದನ್ನೇ ಅರಗಿಸಿಕೊಳ್ಳಲು ಆಗುತ್ತಿಲ್ಲ, ಎನ್.ಡಿ.ಎ ಅವರಿಗೂ ಆಗುತ್ತಿಲ್ಲ, ಅವರಿಗೆ ರಾಜಕಾರಣ ಮುಖ್ಯ ಎಂದರು.
ವಿಧಾನಸೌಧ ಬೇಕಾದರೆ ಮುಖ್ಯಮಂತ್ರಿ ಮಾರಿ ಬಿಡುತ್ತಾರೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅವರಿಗೆ ನನ್ನ ಬಗ್ಗೆ ನಾಲ್ಕು ಮಾತನಾಡಿ ಸಂತೋಷವಾಗುವುದಾದರೆ ಮಾತನಾಡಲಿ, ಅಸೂಯೆಗೆ ಮದ್ದಿಲ್ಲ, ಅವರಿಗೆ ಅಸೂಹೆ ಹೆಚ್ಚಾಗಿದೆ. ನಾನು ಈಗಾಗಲೇ ಹೇಳಿದ್ದೇನೆ ಟೀಕೆಗಳು ಸಾಯುತ್ತವೆ, ನನ್ನ ಕೆಲಸಗಳು ಉಳಿಯುತ್ತವೆ ಎಂದು ಹೇಳಿದರು.






