ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲೂ ಮತಗಳ್ಳತನ ಆಗಿದೆ : ಎಂ.ಲಕ್ಷ್ಮಣ್ ಆರೋಪ

ಎಂ.ಲಕ್ಷ್ಮಣ್
ಮೈಸೂರು : ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲೂ ಮತಗಳ್ಳತನವಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹಾಗೂ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಹಳಷ್ಟು ಲೋಪವಾಗಿದೆ. ಇವಿಎಂನಲ್ಲಿ ಬಿಜೆಪಿ ಮತಗಳ್ಳತನ ಮಾಡಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. ಒಟ್ಟು 2202 ಬೂತ್ ನ 292 ಬೂತ್ ಗಳಲ್ಲಿ ಮತಗಳ್ಳತನ ನಡೆದಿದೆ. 292 ಇವಿಎಂ ಯಂತ್ರದಲ್ಲಿ ರಿಗ್ಗಿಂಗ್ ಆಗಿದೆ ಎಂದು ಆರೋಪಿಸಿದ್ದಾರೆ.
ಚಾಮರಾಜ, ಕೃಷ್ಣರಾಜ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ 1.45,616 ಮತಗಳು ಚಲಾವಣೆಯಾಗಿದ್ದು ಕಾಂಗ್ರೆಸ್ ಗೆ 27,522 ಮತಗಳು ಬಿಜೆಪಿಗೆ 1.18,94 ಮತಗಳು ಬಂದಿದೆ. 2023ರ ವಿಧಾನಸಭೆ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಶೇ.40ಕ್ಕಿಂತ ಕಡಿಮೆ ಮತ ಬಂದಿಲ್ಲ. ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಶೇ.10 ಕ್ಕಿಂತ ಕಡಿಮೆ ಮತ ಬಂದಿರುವುದು ಮತಗಳ್ಳತನ ಅಗಿದೆ ಎಂಬುದಕ್ಕೆ ಸಾಕ್ಷಿ ಎಂದು ಹೇಳಿದರು.
ಗ್ರಾಮವೊಂದರ ಬೂತ್ ನಲ್ಲಿ 700 ಮತಗಳು ಚಲಾವಣೆಯಾಗಿದೆ. ಅದರಲ್ಲಿ 15 ಕಾಂಗ್ರೆಸ್ ಕಾರ್ಯಕರ್ತರ ಮನೆಗಳಿವೆ. ಕಡಿಮೆ ಅಂದರು 50 ಮತಗಳು ಬರಬೇಕು. ಆದರೆ ಬಂದಿದ್ದು ಕೇವಲ 7 ಮತಗಳು. ನರಸಿಂಹ ರಾಜ ಕ್ಷೇತ್ರದ ಶಾಂತಿನಗರದಲದಲ್ಲಿ ಒಂದೇ ಸಮುದಾಯ ಇದೆ. ಇದರಲ್ಲಿ 700 ಮತ ಕಾಂಗ್ರೆಸ್ ಗೆ ಬಂದರೆ ಬಿಜೆಪಿಗೆ 200 ಮತಗಳು ಬಂದಿವೆ. ಬಿಜೆಪಿಗೆ ಒಂದು ಮತವೂ ಬರುವ ಸಾಧ್ಯತೆ ಇಲ್ಲ. ಇದರ ಜೊತೆಗೆ 700 ಮಂದಿ ಮತದಾರರಿದ್ದರೂ 750 ಮತಗಳು ಚಲಾವಣೆಯಾಗಿವೆ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಇದೆಲ್ಲ ವಿಚಾರಗಳನ್ನು ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಪ್ರಸ್ತಾಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ ಎಂದು ಹೇಳಿದರು.







