ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಪ್ರತಾಪ್ ಸಿಂಹ, ಎಂ.ಜಿ.ಮಹೇಶ್ ವಿರುದ್ಧ ಕ್ರಮ ಕೈಗೊಳ್ಳಿ : ಎಂ.ಲಕ್ಷ್ಮಣ್ ದೂರು

ಮೈಸೂರು, ಆ.30 : ಅರ್ಚಕರೊಬ್ಬರು ಮುಖ್ಯಮಂತ್ರಿಗಳ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿರುವುದರ ಬಗ್ಗೆ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ನಗರದ ಪೊಲೀಸ್ ಆಯುಕ್ತರ ಕಚೇರಿಗೆ ಶನಿವಾರ ಕಾಂಗ್ರೆಸ್ ಮುಖಂಡರೊಂದಿಗೆ ಆಗಮಿಸಿ, ಡಿಸಿಪಿ ಬಿಂದುಮಣಿ ಆರ್. ಅವರಿಗೆ ದೂರಿನ ಪ್ರತಿ ನೀಡಿದರು.
ದೂರಿನ ವಿವರ:
ಬೆಂಗಳೂರಿನ ಖಾಸಗಿ ವಾಹಿನಿಯ ಕನ್ನಡ ಚಾನಲ್‌ನಲ್ಲಿ ಅರ್ಚಕರೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಹೇಳನಾಕಾರಿಯಾಗಿ ನಿಂದಿಸಿರುವುದಲ್ಲದೆ, ʼಬೂಕರ್ ಪ್ರಶಸ್ತಿʼ ಪಡೆದಿರುವ ನಮ್ಮ ನಾಡಿನ ಹೆಮ್ಮೆಯ ಪುತ್ರಿ ಬಾನು ಮುಷ್ತಾಕ್ ಅವರನ್ನು ಸರಕಾರ ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದನ್ನು ವಿರೋಧಿಸಿ ಹಿಂದೂ-ಮುಸ್ಲಿಂ ಸಮುದಾಯದಲ್ಲಿರುವ ಶಾಂತಿಯುತ ಮನಸ್ಸನ್ನು ಕದಡಿ ಕೋಮು ಗಲಭೆ ಸೃಷ್ಟಿಸುವ ಹೇಳಿಕೆಯನ್ನು ನೀಡಿರುತ್ತಾರೆ. ಈ ಅರ್ಚಕನ ವಿರುದ್ಧ ಕೂಡಲೇ ಎಫ್.ಐ.ಆರ್ ದಾಖಲಿಸಿ ದಸ್ತಗಿರಿ ಮಾಡಬೇಕು. ಇಲ್ಲವಾದರೆ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾದರೆ ಪೊಲೀಸ್‌ನವರೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ಎಂಬ ವ್ಯಕ್ತಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ನಿಂದಿಸುವುದಲ್ಲದೆ, ಇವರ ವಿರುದ್ಧ ಸುಳ್ಳು ಹೇಳಿಕೆಗಳ ಮೂಲಕ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ಕೋಮುಗಲಭೆ ಸೃಷ್ಟಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಗೂ ʼಬೂಕರ್ ಪ್ರಶಸ್ತಿʼ ತಂದುಕೊಟ್ಟ ಮಹಿಳೆಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಇವರ ಉದ್ದೇಶ ಕೋಮುಗಲಭೆ ಸೃಷ್ಟಿಸಬೇಕು ಎಂಬುದಾಗಿದೆ.
ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ಎಂಬುವರು ಮುಖ್ಯಮಂತ್ರಿಗಳಿಗೆ 24 ಗಂಟೆ ಗಡುವನ್ನು ಕೊಡುವುದಲ್ಲದೆ, ಸ್ಪಷ್ಟಿಕರಣ ನೀಡಬೇಕು ಎಂದು ಹೇಳುವ ಮೂಲಕ ದಸರಾ ಕಾರ್ಯಕ್ರಮಕ್ಕೆ ಅಡಚಣೆ ಮಾಡುತ್ತೇವೆ ಎಂದು ಧಮ್ಕಿ ಹಾಕಿರುತ್ತಾರೆ. ಆದ್ದರಿಂದ ಕೂಡಲೇ ಇವರುಗಳನ್ನು ದಸ್ತಗಿರಿ ಮಾಡಬೇಕು ಎಂದು ದೂರಿನ ಮೂಲಕ ಆಗ್ರಹಿಸಿದ್ದಾರೆ.







