ರಾಜ್ಯ ಸರಕಾರ ನಡೆಸುತ್ತಿರುವುದು ಜಾತಿಗಣತಿಯಲ್ಲ, ಸಮಾಜಿಕ-ಆರ್ಥಿಕ ಸಮೀಕ್ಷೆ : ಎಂ.ಲಕ್ಷ್ಮಣ್

ಮೈಸೂರು : ರಾಜ್ಯ ಸರಕಾರ ನಡೆಸುತ್ತಿರುವುದು ಜಾತಿಗಣತಿಯಲ್ಲ, ಸಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಅದನ್ನೇ ಬಿಜೆಪಿ ಮುಖಂಡರು ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಹಿಂದುಳಿದ ವರ್ಗಗಳ ಅಯೋಗ ಸರ.22 ರಿಂದ ಅ.7 ರವರೆಗೆ ಸಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸುತ್ತಿದೆ. ಈ ಹಿಂದಿನ ಹಳೆ ವರದಿಯನ್ನು ಒಪ್ಪದಂತೆ ಮಾಡಿದರು. ವರದಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಈ ಸಮೀಕ್ಷೆಯಲ್ಲಿ ಕೈಗೊಳ್ಳಲಾಗುತ್ತಿದೆ. ಆದರೆ ಸಮೀಕ್ಷೆ ಬಗ್ಗೆ ಸುಳ್ಳುಗಳನ್ನು ಹೇಳಿ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಗರು ಸಮೀಕ್ಷೆಯಷ್ಟೇ ಅಲ್ಲ, ಯಾವ ಕೆಲಸವನ್ನು ಮಾಡಲು ಬಿಡುತ್ತಿಲ್ಲ. ಭಾವನಾತ್ಮಕ ವಿಷಯಗಳನ್ನು ಮುನ್ನಲೆಗೆ ತರುತ್ತಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ಆಲಮಟ್ಟಿ ಅಣೆಕಟ್ಟೆಯನ್ನು 519 ಮೀಟರ್‌ನಿಂದ 524 ಮೀಟರ್‌ಗೆ ಎತ್ತರಿಸುತ್ತಿದೆ. ಅದರಿಂದ 10 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿ ಆಗಲಿದೆ. ಅಭಿವೃದ್ಧಿ ಬಗ್ಗೆಯಷ್ಟೇ ಸರ್ಕಾರ ಮಾತನಾಡಲಿದೆ ಎಂದು ಹೇಳಿದರು.
ಪ್ರತಾಪ್ ಸಿಂಹ ಚಾಮರಾಜ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮೈಸೂರು ದಸರಾ ವೇಳೆ ಏನಾದರೂ ಕಪ್ಪು ಬಟ್ಟೆ ಪ್ರದರ್ಶನ ಮಾಡಿದರೆ, ಕ್ರಿಮಿನಲ್ ಕೇಸ್ ಹಾಕಬೇಕು. ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಮಾಡುವ ಬಗ್ಗೆ ವಿರೋಧ ಮಾಡಿದರೆ, ಪ್ರತಾಪ್ ಸಿಂಹ ಸೇರಿದಂತೆ ಹಲವರನ್ನು ಗಡಿಪಾರು ಮಾಡಬೇಕು ಎಂದರು.







