ಹೈಡ್ರಾಮ ಸೃಷ್ಟಿಸಿದ ಮಹಿಳೆ ಹಿಂದೆ ಬಿಜೆಪಿ ನಾಯಕರ ಕೈವಾಡ : ಎಂ.ಲಕ್ಷ್ಮಣ್ ಆರೋಪ

ಮೈಸೂರು : ಹುಬ್ಬಳ್ಳಿಯಲ್ಲಿ ಪೊಲೀಸರು ವಿವಸ್ತ್ರಗೊಳಿಸಿದರು ಎಂದು ಆರೋಪಿಸಿ ಹೈಡ್ರಾಮ ಸೃಷ್ಟಿಸಿದ ಮಹಿಳೆ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಾಟಕವಾಡಿದ ಬಿಜೆಪಿ ಕಾರ್ಯಕರ್ತೆ ಮೇಲೆ ಹುಬ್ಬಳ್ಳಿಯ 9 ಪೊಲೀಸ್ ಠಾಣೆಗಳಲ್ಲಿ ಕೊಲೆ, ಹನಿಟ್ರ್ಯಾಪ್, ಬೆದರಿಕೆ, ಮೋಸ ಸೇರಿದಂತೆ 47 ಪ್ರಕರಣಗಳು ದಾಖಲಾಗಿವೆ. ಈಕೆ ಮೇಲೆ ರೌಡಿ ಶೀಟ್ ತೆರೆಯಲಾಗಿದೆ. ಈಕೆ ಒಬ್ಬ ಕ್ರಿಮಿನಲ್ ಹಿನ್ನೆಲೆಯುಳ್ಳ ಮಹಿಳೆ. ಈ ಘಟನೆಯ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೈವಾಡ ಇದೆ ಎಂದು ಆರೋಪಿಸಿದರು.
ಓಟ್ ಚೋರಿ ಅಭಿಯಾನ ನಡೆಯುತ್ತಿದ್ದ ವೇಳೆ ಸುಜಾತಾ ಹಂಡಿ, ಅಧಿಕಾರಿಗಳೊಟ್ಟಿಗೆ ಹೋಗಿ ಮತದಾರರ ಪಟ್ಟಿಯಿಂದ ಕೆಲವರನ್ನು ತೆಗೆಸುವ ಕೆಲಸ ಮಾಡುತ್ತಿದ್ದಳು, ಇದನ್ನು ಅಲ್ಲಿನ ಕಾಂಗ್ರೆಸ್ ಕಾರ್ಪೋರೇಟರ್ ಪ್ರಶ್ನಿಸಿದ್ದಕ್ಕೆ ಅವರ ಮೇಲೆಯೇ ತನ್ನ ಬೆಂಬಲಿಗರನ್ನು ಕಟ್ಟಿಕೊಂಡು ಹಲ್ಲೆ ನಡೆಸಿದ್ದಾಳೆ. ಈ ವೇಳೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯ ಮನೆಗೆ 17 ಬಾರಿ ಹೋಗಿ ಪೊಲೀಸ್ ಠಾಣೆಗೆ ಬರುವಂತೆ ಕರೆದಿದ್ದಾರೆ. ಆದರೂ ಆಕೆ ಬಂದಿಲ್ಲ. ನಂತರ ಈಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರನ್ನು ಭೇಟಿ ಮಾಡಿದ್ದಾಳೆ. ನಂತರ ಈ ರೀತಿ ನಾಟಕ ಮಾಡಿದ್ದಾಳೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರಸ್ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡರಾದ ಬಿ.ಎಂ.ರಾಮು, ಗಿರೀಶ್, ಹೇಮಂತ್ , ಮಾಧ್ಯಮ ವಕ್ತಾರ ಮಹೇಶ್ ಉಪಸ್ಥಿತರಿದ್ದರು.







