ಎಸ್.ಐ.ಆರ್ ಹೆಸರಿನಲ್ಲಿ ರಾಜ್ಯದಲ್ಲಿ 86 ಲಕ್ಷ ಮತದಾರರನ್ನು ಕೈಬಿಡಲು ಬಿಜೆಪಿ ಹುನ್ನಾರ : ಎಂ.ಲಕ್ಷ್ಮಣ್ ಆರೋಪ

ಮೈಸೂರು, ಮೇ.12 : ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್) ಹೆಸರಿನಲ್ಲಿ ರಾಜ್ಯದಲ್ಲಿ 86 ಲಕ್ಷ ಮತದಾರರನ್ನು ಕೈ ಬಿಡಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮತಗಳನ್ನು ಕದಿಯುವ ಮೂಲಕ ಹಗಲು ದರೋಡೆಗೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಚುನಾವಣಾ ಆಯೋಗದ ಮೂಲಕ ದೇಶಾದ್ಯಂತ ಎಸ್.ಐ.ಆರ್ ಅಡಿಯಲ್ಲಿ ಮತಗಳನ್ನು ಕದಿಯುತ್ತಿದ್ದಾರೆ. ಈಗಾಗಲೇ ಹರಿಯಾಣ, ಬಿಹಾರ, ಮಹರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ಮತದಾರರನ್ನು ಕೈಬಿಟ್ಟು ಚುನಾವಣೆ ಗೆದ್ದಿದ್ದಾರೆ. ಈಗ ಕರ್ನಾಟಕದಲ್ಲೂ ಚುನಾವಣಾ ಮ್ಯಾಪಿಂಗ್ ಗೆ ಮುಂದಾಗಿದ್ದಾರೆ ಎಂದು ತಿಳಿಸಿದರು.
ಈಗಾಗಲೇ 15 ದಿನಗಳ ಹಿಂದೆಯೇ ರಾಜ್ಯಾದ್ಯಂತ ಮ್ಯಾಪಿಂಗ್ ಕಾರ್ಯ ಮುಗಿದಿದೆ. ರಾಜ್ಯದಲ್ಲಿ 2025-2026 ರಲ್ಲಿ ಒಟ್ಟು 5.5 ಕೋಟಿ ಮತದಾರರು ಇದ್ದಾರೆ. ಶೇ.85 ರಷ್ಟು ಮ್ಯಾಪಿಂಗ್ ಮಾಡಿದ್ದು ಶೇ.15 ರಷ್ಟು ಅಂದರೆ 86 ಲಕ್ಷದಷ್ಟು ಮ್ಯಾಪಿಂಗ್ ಮಾಡದೆ ಮತದಾರರ ಪಟ್ಟಿಯಿಂದ ಹೊರಗಿಟ್ಟಿದ್ದಾರೆ. ಚುನಾವಣಾ ಆಯೋಗವನ್ನು ಕೇಳಿದರೆ ಕೈ ಬಿಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ಚುನಾವಣಾ ಸಮಯದಲ್ಲಿ ಕೈಬಿಟ್ಟು ಬಿಜೆಪಿಯವರಿಗೆ ಪೂರಕ ವಾತಾವರಣ ಸೃಷ್ಟಿ ಮಾಡಲಿದ್ದಾರೆ ಎಂದು ಕಿಡಿಕಾರಿದರು.
ಉದಾಹರಣೆಗೆ ಮೈಸೂರು ಜಿಲ್ಲೆಯಲ್ಲಿ ಮ್ಯಾಪಿಂಗ್ ಕಾರ್ಯ ಮುಗಿದಿದೆ. ಮೈಸೂರು ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು, ಒಟ್ಟು 27,99,744 ಮತದಾರರಿದ್ದಾರೆ. ಇದರಲ್ಲಿ 3,48,544 ಮಂದಿಯನ್ನು ಕೈ ಬಿಡಲು ಮುಂದಾಗಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ 71,521 ಮತದಾರರನ್ನು ಕೈಬಿಡಲು ಸಿದ್ಧತೆ ನಡೆಸಿದ್ದಾರೆ. ಅದೇ ರೀತಿ ನರಸಿಂಹರಾಜ ಕ್ಷೇತ್ರದಲ್ಲಿ 59,749 ಮತದಾರರನ್ನು ಕೈಬಿಡಲು ಮುಂದಾಗಿದ್ದಾರೆ. ಇದರಲ್ಲಿ 40 ಸಾವಿರ ಮುಸ್ಲಿಮ್ ಮತದಾರೇ ಇದ್ದಾರೆ. ಹೀಗಾದರೆ ತನ್ವೀರ್ ಸೇಠ್ ಅಂತ ಅಲ್ಪಸಂಖ್ಯಾತ ನಾಯಕರು ಹೇಗೆ ಚುನಾವಣೆ ಗೆಲ್ಲಲು ಸಾಧ್ಯ ಎಂದು ಪ್ರಶ್ನಿಸಿದರು.
1985ರ ನಂತರ ಹುಟ್ಟಿದವರು ಮ್ಯಾಪಿಂಗ್ ಗೆ ಒಳಪಡುವುದಿಲ್ಲ. ಬಳಿಕ ಹುಟ್ಟಿದವರು 2002ರ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಏನಿತ್ತು 2025ರಲ್ಲಿ ಏನಿದೆ ಅವೆರೆಡೂ ಮ್ಯಾಪಿಂಗ್ ಆಗಬೇಕು. ಅದರಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ. ಎಲ್ಲವೂ ಸರಿಯಾಗಬೇಕು ಎಂದರೆ ನಮ್ಮ, ತಂದೆ ಮತ್ತು ತಾತ ಅವರ ಮತದಾರರ ಕಾರ್ಡ್ ಗಳನ್ನು ತರಬೇಕು. ಅವುಗಳನ್ನು ತರಲು ಸಾಧ್ಯವೇ ಎಂದು ಕೇಳಿದರು.
ಎಸ್.ಐ.ಆರ್ ನಲ್ಲಿ ತಂದೆಯದು ಮ್ಯಾಪಿಂಗ್ ಆಗಲಿಲ್ಲ ಎಂದರೆ ಅವರ ಮಕ್ಕಳು ಮ್ಯಾಪಿಂಗ್ ಗೆ ಒಳಪಡುವುದಿಲ್ಲ. ಹೀಗೆ ಹಲವಾರು ರೀತಿ ಹುನ್ನಾರ ಮಾಡಿ 2028ಕ್ಕೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಯತ್ನಿಸುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರೇಮಾ ಶಂಕರ್, ಮುಖಂಡರುಗಳಾದ ಬಿ.ಎಂ.ರಾಮು, ಅಬ್ರಹಾರ್, ಗಿರೀಶ್, ಮಾಧ್ಯಮ ವಕ್ತಾರ ಕೆ.ಮಹೇಶ್ ಉಪಸ್ಥಿತರಿದ್ದರು.
ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಏನು ತಿನ್ನಬೇಕು, ಏನು ಬಳಸಬೇಕು, ಏನು ಉಳಿಸಬೇಕು ಎಂಬುದನ್ನು ಹೇಳುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಚಿನ್ನ ಖರೀದಿಸಬೇಡಿ, ವಿದೇಶಕ್ಕೆ ಹೋಗಬೇಡಿ, ಪೆಟ್ರೋಲ್ ಮತ್ತು ಗ್ಯಾಸ್ ಮಿತವಾಗಿ ಬಳಸಿ. ರಸಗೊಬ್ಬ ಬಳಸಬೇಡಿ, ಮೆಟ್ರೋದಲ್ಲಿ ಓಡಾಡಿ. ಮನೆಯಲ್ಲೇ ಕೆಲಸಮಾಡಿ ಎಂದು ಮೋದಿ ಕರೆಕೊಟ್ಟಿದ್ದಾರೆ. 12 ವರ್ಷ ಆಡಳಿತ ನಡೆಸಿದ ಪ್ರಧಾನಿ ಜನಸಾಮಾನ್ಯರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡಿರುವುದು ಖಂಡನೀಯ ಎಂದರು.






