ಕಾಂಗ್ರೆಸ್ ನಿಜವಾದ ʼಗ್ಯಾರಂಟಿʼ ನೀಡಿದರೆ, ಮೋದಿ ಸುಳ್ಳಿನ ʼಗ್ಯಾರಂಟಿʼ ನೀಡುತ್ತಿದ್ದಾರೆ : ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
"ವಿದೇಶಗಳಿಗೆ ಪ್ರವಾಸ ಕೈಗೊಳ್ಳುವ ಪ್ರಧಾನಿ ಹಿಂಸಾಚಾರದಿಂದ ನಲುಗಿರುವ ಮಣಿಪುರಕ್ಕೆ ಭೇಟಿ ಕೊಟ್ಟಿಲ್ಲ"

ಮೈಸೂರು : ʼರಾಜ್ಯದ ಕಾಂಗ್ರೆಸ್ ಸರಕಾರ ನೀಡುತ್ತಿರುವುದು ನಿಜವಾದ, ಬದುಕಿನ ಗ್ಯಾರಂಟಿಗಳಾದರೆ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿರುವುದು ಸುಳ್ಳಿನ ಗ್ಯಾರಂಟಿʼ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ವಾಗ್ದಾಳಿ ನಡೆಸಿದರು.
ನಗರದ ಮಹರಾಜ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಸರಕಾರದ ಎರಡು ವರ್ಷಗಳ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, "ಮೋದಿ ಅಂದರೆ ಬರೀ ಸುಳ್ಳು, ಅವರು ಹೇಳುವುದೆಲ್ಲ ಸುಳ್ಳಿನ ಗ್ಯಾರಂಟಿಗಳು, ರಾಜ್ಯದ ಕಾಂಗ್ರೆಸ್ ಸರಕಾರ ನೀಡುತ್ತಿರುವ ಗ್ಯಾರಂಟಿಗಳು ದೇಶದಲ್ಲೇ ಪ್ರಸಿದ್ಧಿಯಾಗಿದೆ. ಆದರೆ ಬಿಜೆಪಿ ಘೋಷಣೆ ಮಾಡಿದ ಗ್ಯಾರಂಟಿಗಳು ಎಲ್ಲೂ ನಡೆಯುತ್ತಿಲ್ಲ" ಎಂದು ಟೀಕಿಸಿದರು.
ಬಿಜೆಪಿಯವರು ಯಾವುದೇ ಅಭಿವೃದ್ಧಿ ಮಾಡದೇ ಕೇವಲ ಟೀಕೆಯಲ್ಲಿ ತೊಡಗಿರುತ್ತಾರೆ. ಹಾಗಾಗಿ ಬಿಜೆಪಿಯವರು ಟೀಕಾಚಾರಿಗಳು. ಮೋದಿ ಹಾಗು ಮೋದಿ ಶಿಷ್ಯರ ಕೊಡುಗೆ ಮೈಸೂರು-ಬೆಂಗಳೂರು ಕರ್ನಾಟಕಕ್ಕೆ ಏನು ಎಂಬುದನ್ನು ತಿಳಿಸಬೇಕು. ಬಿಜೆಪಿಯವರು ಬರೀ ಟಿ.ವಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಯಾವುದೇ ಪ್ರಧಾನಿ ದಿನಬೆಳಗಾದರೆ ಇವರ ರೀತಿ ಮಾತನಾಡುತ್ತಿರಲಿಲ್ಲ ಎಂದು ಹೇಳಿದರು.
ಹತ್ತಾರು ವಿದೇಶಗಳಿಗೆ ಪ್ರವಾಸ ಕೈಗೊಳ್ಳುವ ಮೋದಿ ಹಿಂಸಾಚಾರದಿಂದ ನಲುಗಿರುವ ಮಣಿಪುರಕ್ಕೆ ಭೇಟಿ ಕೊಟ್ಟಿಲ್ಲ, ದೇಶದ ಜನರು ಸಾಯುತ್ತಿರುವಾಗಲೂ ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ತೆರಳುತ್ತಾರೆ ಎಂದು ಟೀಕಿಸಿದರು.
ಸಂವಿಧಾನ ಬದಲಾವಣೆ ಮಾಡಲು ಬಿಜೆಪಿ ಆರೆಸ್ಸೆಸ್ ಪ್ರಯತ್ನಿಸುತ್ತಿವೆ. ಇದು ಎಂದಿಗೂ ಸಾಧ್ಯವಾಗುವುದಿಲ್ಲ. ಸಂವಿಧಾನವನ್ನು ನಿಮ್ಮ ತಾತ ಬಂದು ಮಾಡಿದ್ನಾ? ಅಥವಾ ಆರೆಸ್ಸೆಸ್ ನವರು ಮಾಡಿದ್ರಾ? ಎಂದು ಪ್ರಶ್ನಿಸಿದರು.
ಡಾ.ಅಂಬೇಡ್ಕರ್ ನೇತೃತ್ವದ ಏಳು ಜನರ ಸಮಿತಿ ಸಂವಿಧಾನ ರಚನೆ ಮಾಡಿದೆ. ಸಂವಿಧಾನದಡಿ ಮುಖ್ಯಮಂತ್ರಿ, ಪ್ರಧಾನಿ ಪಟ್ಟ ಅಲಂಕರಿಸಿದ ಮೋದಿ ಇದೀಗ ಸಂವಿಧಾನದ ಕಗ್ಗೊಲೆಗೆ ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಈ ನಾಡಿನ ಜನ ಅವಕಾಶ ಮಾಡಿಕೊಡಬಾರದು ಎಂದು ಕರೆ ನೀಡಿದರು.







