ದೇಶಾದ್ಯಂತ ಸರ್ಕಾರಿ ಕಚೇರಿಗಳಿಗೆ ಹುಸಿಬಾಂಬ್ ಸಂದೇಶ ಕಳುಹಿಸಿದ್ದ ಆರೋಪಿ ಶ್ರೀನಿವಾಸ್ ನನ್ನು ಮೈಸೂರಿನಲ್ಲಿ ಬಂಧಿಸಿದ ದಿಲ್ಲಿ ಪೊಲೀಸರು

ಬಂಧಿತ ಆರೋಪಿ ಶ್ರೀನಿವಾಸ್
ಮೈಸೂರು: ದೇಶಾದ್ಯಂತ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ನ್ಯಾಯಾಲಯಗಳಿಗೆ ಹುಸಿಬಾಂಬ್ ಸಂದೇಶಗಳನ್ನ ಕಳುಹಿಸಿ ಆತಂಕ ಸೃಷ್ಟಿಸುತ್ತಿದ್ದ ಆರೋಪದಲ್ಲಿ ಮೈಸೂರಿನಲ್ಲಿ ವ್ಯಕ್ತಿಯೋರ್ವನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
ಶ್ರೀನಿವಾಸ್ ಬಂಧಿತ ಆರೋಪಿ. ಈತ ಮೈಸೂರಿನ ಬೃಂದಾವನ ಬಡಾವಣೆಯ ನಿವಾಸಿ ಎನ್ನಲಾಗಿದೆ.
ಇತ್ತೀಚೆಗೆ ಸರ್ಕಾರಿ ಕಚೇರಿಗಳು, ಶಾಲಾ ಕಟ್ಟಡಗಳು ಹಾಗೂ ನ್ಯಾಯಾಲಯಗಳಿಗೆ ಬಾಂಬ್ ಸ್ಪೋಟವಾಗುವ ಬೆದರಿಕೆ ಸಂದೇಶ ಬಂದು ಆತಂಕ ಸೃಷ್ಟಿಯಾಗಿತ್ತು.
ಒಂದೇ ತಿಂಗಳಿನಲ್ಲಿ ಹಲವು ಬಾರಿ ಮೇಲ್ ಮೂಲಕ ಸಂದೇಶ ರವಾನೆ ಆಗಿದೆ. ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಸರ್ಕಾರ ಹುಸಿ ಬಾಂಬ್ ರೂವಾರಿಯನ್ನು ಬಂಧಿಸಲು ಮುಂದಾಗಿದ್ದು, ಮೈಸೂರಿನಲ್ಲಿ ಕಾರ್ಯಾಚರಣೆ ನಡೆಸಿದ ದಿಲ್ಲಿ ಪೊಲೀಸರ ತಂಡ ಆರೋಪಿ ಶ್ರೀನಿವಾಸ್ ನನ್ನು ಬಂಧಿಸಿದ್ದಾರೆ.
ಬಂಧನದ ವೇಳೆ ಆರೋಪಿಯ ಮನೆಯಲ್ಲಿ ಹಲವು ಸಿಮ್ ಕಾರ್ಡ್ಗಳು ಹಾಗೂ ಲ್ಯಾಪ್ಟಾಪ್ ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಪರಿಶೀಲನೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ದಿಲ್ಲಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಿದ್ದರು.
ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ದಿಲ್ಲಿಗೆ ಕರೆದೊಯ್ಯಲಾಗುತ್ತಿದೆ ಎಂದು ತಿಳಿದು ಬಂದಿದೆ.




