ಪ್ರೊ.ಮುಜಾಫರ್ ಅಸ್ಸಾದಿ ಇರುತ್ತಿದ್ದರೆ ಎಸ್‌ಐಆರ್ ಬಗ್ಗೆ ಚರ್ಚಿಸುತ್ತಿದ್ದರು: ದಿನೇಶ್ ಅಮಿನ್ ಮಟ್ಟು
ಪ್ರೊ.ಮುಜಾಫರ್ ಅಸ್ಸಾದಿ ಸ್ಮರಣಾರ್ಥ ಕಾರ್ಯಕ್ರಮ

ಮೈಸೂರು: ಪ್ರೊ. ಮುಜಾಫರ್ ಅಸ್ಸಾದಿ ಅವರು ಇರುತ್ತಿದ್ದರೆ ಚುನಾವಣೆಯ ಪ್ರಕ್ರಿಯೆಯ ಎಸ್‌ಐಆರ್ ಬಗ್ಗೆ ಮಾತನಾಡುತ್ತಿದ್ದರು. ಅಲ್ಲದೇ ಜೆನ್ ಝೀಗಳ ಹೋರಾಟದ ರೂಪುರೇಷೆಗಳ ಬಗ್ಗೆ ವಿಸ್ತೃತ ಚರ್ಚೆ ಮಾಡುತಿದ್ದರು. ಇವರ ನಿರ್ವಾತ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಹೇಳಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ, ಸಾರ್ವಜನಿಕ ಆಡಳಿತ ವಿಭಾಗ ಮತ್ತು ಮೈಸೂರು ಓಪನ್ ಫೋರಂ ವತಿಯಿಂದ ಮಾನಸಗಂಗೋತ್ರಿಯ ಬಿ.ಎಂ.ಶ್ರೀಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರೊ.ಮುಜಾಫರ್ ಅಸ್ಸಾದಿ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವವಿದ್ಯಾನಿಲಯ ಪ್ರವೇಶಿಸಲಾಗದವರ ಬಳಿಗೆ ತೆರಳಿದ ಸಾಮಾಜಿಕ ಬುದ್ಧಿಜೀವಿ ಪ್ರೊ.ಮುಜಾಫರ್ ಅಸ್ಸಾದಿ. ವಿವಿ ಆವರಣಕ್ಕೆ ಕೂಲಿಕಾರ್ಮಿಕರು, ಆದಿವಾಸಿಗಳು, ಬಡವರಿಗೆ ಪ್ರವೇಶ ಇಲ್ಲ. ವಿವಿಗಳಿಗೆ ಪ್ರವೇಶ ದೊರೆಯದ ಜನಗಳ ಬಳಿಗೆ ಹೋದವರು ಅಸ್ಸಾದಿ. ಅವರು ದಂತಗೋಪುರದ ಪ್ರಾಧ್ಯಾಪಕರಾಗಲಿಲ್ಲ. ಬೀದಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದರು. ನೊಂದವರ ಪರ ಬರೆಯುತ್ತಿದ್ದರು. ಅವರಿಗಾಗಿ ಹೋರಾಡುತ್ತಿದ್ದರು ಎಂದು ತಿಳಿಸಿದರು.
ಅಸ್ಸಾದಿ ಅವರಿಗೆ ಹೊಂದಾಣಿಕೆ ಮನೋಭಾವ ಇದ್ದಿದ್ದರೆ, ವಿಶ್ವವಿದ್ಯಾನಿಲಯವೊಂದರ ಕುಲಪತಿಯಾಗಿ ನಿವೃತ್ತರಾಗಬೇಕಿತ್ತು. ಆದರೆ, ಅವರ ಜೀವನದುದ್ದಕ್ಕೂ ಸೈದ್ಧಾಂತಿಕವಾಗಿ ಬದುಕಿದವರು. ಅಸ್ಸಾದಿ ಅವರಿಗೆ ಹುದ್ದೆಗಿಂತ ಸೈದ್ಧಾಂತಿಕ ನಿಲುವು ತುಂಬ ಮುಖ್ಯವಾಗಿತ್ತು ಎಂದು ನುಡಿದರು.
ರಾಜ್ಯಶಾಸ್ತ್ರ ಅಧ್ಯಯನ ವಿಭಾಗ ಮುಖ್ಯಸ್ಥ, ಪ್ರೊ.ಕೃಷ್ಣ ಹೊಂಬಾಳ್ ಮಾತನಾಡಿ, ವ್ಯಕ್ತಿಗೆ ವೈಯಕ್ತಿಕ, ಸಾಮುದಾಯಿಕ, ಧಾರ್ಮಿಕ ಹಾಗೂ ರಾಷ್ಟ್ರೀಯತೆ ಬಗ್ಗೆ ಯಾವ ನಿಲುವು ಹೊಂದಬೇಕು ಎಂದು ಸಂದಿಗ್ಧತೆ ಇರುತ್ತದೆ. ಆ ಸಂದಿಗ್ಧತೆಯನ್ನು ಮೀರಿದವರು ಮುಜಾಫರ್ ಅಸ್ಸಾದಿ ಎಂದು ನುಡಿದರು.
ತುಮಕೂರು ವಿವಿಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಮಹಾಲಿಂಗು ಅವರು, ಸಾಮಾಜಿಕ ಚಳವಳಿ ಮತ್ತು ಮೌಲ್ಯಾಧಾರಿತ ವಿಚಾರಗಳು ಕುರಿತು ವಿಷಯ ಮಂಡನೆ ಮಾಡಿದರು.
ಮೈವಿವಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ರವಿ ಜೋಶಿ, ಹೈದರಾಬಾದ್‌ನ ಎಂಎಎನ್‌ಯುಯು ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಡಾ.ಶಬನ ಫರ್ಹಾನ್, ಸಂಚಾಲಕರಾದ ಡಾ.ಜಿ.ಟಿ.ರಾಮಚಂದ್ರಪ್ಪ, ಡಾ.ಸಿ.ಎಲ್.ಸೋಮಶೇಖರ್, ಪ್ರೊ.ಉಮಾಪತಿ, ಪ್ರೊ.ಬೆಳ್ಳಿಯಪ್ಪ, ಪ್ರೊ.ಮುಜಾಫರ್ ಅಸ್ಸಾದಿ ಅವರ ಪತ್ನಿ ಮತ್ತಿತರರು ಹಾಜರಿದ್ದರು.
ಜೆನ್-ಝೀ ನಿಲುವುಗಳ ಬಗ್ಗೆ ಅನುಮಾನ ಇದೆ. ಅಹಿಂದ ಸಮಾನ ದುಃಖಿಗಳ ಸಂಘಟನೆ ಆಗಬೇಕು. ಸಾಮಾಜಿಕ ಬುದ್ಧಿಜೀವಿಗಳನ್ನು ಸಾಮ, ದಾನ, ದಂಡವನ್ನು ಬಳಿಸಿ ಹತ್ತಿಕ್ಕಲಾಗುತ್ತಿದೆ. ಪ್ರಗತಿಪರ ಮುಸ್ಲಿಮರು ಮೌನ ವಹಿಸಿದ್ದಾರೆ. ವಿಶ್ವವಿದ್ಯಾನಿಲಯಗಳಲ್ಲಿ ಮುಸ್ಲಿಮ್ ಅಧ್ಯಾಪಕರ ಸಂಖ್ಯೆ ಕ್ಷೀಣಿಸುತ್ತಿದೆ.
-ದಿನೇಶ್ ಅಮಿನ್ ಮಟ್ಟು, ಹಿರಿಯ ಪತ್ರಕರ್ತ.






