ವೀರನಹೊಸಹಳ್ಳಿಯಲ್ಲಿ ದಸರಾ ಗಜಪಯಣಕ್ಕೆ ಸಚಿವ ಡಾ. ಯತೀಂದ್ರ ಸಿದ್ಧರಾಮಯ್ಯ ವಿದ್ಯುಕ್ತ ಚಾಲನೆ: ದಸರಾ ಮಹೋತ್ಸವಕ್ಕೆ ಮುನ್ನುಡಿ
►ಆರು ಬಾರಿ ದಸರಾ ಅಂಬಾರಿ ಹೊತ್ತಿದ್ದ ಅಭಿಮನ್ಯು ಆನೆಗೆ ಸಾಂಪ್ರದಾಯಿಕ ಬೀಳ್ಕೊಡುಗೆ ►ಮೇಳೈಸಿದ ಸಾಂಸ್ಕೃತಿಕ ಕಲಾ ತಂಡಗಳ ವೈಭವ: ಕಿಕ್ಕಿರಿದು ತುಂಬಿದ ಜನಸಾಗರ

ಮೈಸೂರು, ಆ.26: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ಪ್ರಮುಖ ಆಕರ್ಷಣೆ ಗಜಪಯಣಕ್ಕೆ ಬುಧವಾರ ವೀರನಹೊಸಹಳ್ಳಿಯಲ್ಲಿ ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ಧರಾಮಯ್ಯ ಚಾಲನೆ ನೀಡುವ ಮೂಲಕ ದಸರೆಗೆ ಮುನ್ನುಡಿ ಬರೆದರು.
ಬುಧವಾರ ಹುಣಸೂರು ತಾಲೂಕಿನ ನಾಗರಹೊಳೆ ಅಭಯಾರಣ್ಯದ ಉದ್ಯಾನದ ಹೆಬ್ಬಾಗಿಲು ವೀರನಹೊಸಹಳ್ಳಿ ಬಳಿ ಆರು ಬಾರಿ ಅಂಬಾರಿ ಹೊತ್ತು ಜನರ ಮೆಚ್ಚುಗೆಗೆ ಕಾರಣವಾಗಿದ್ದ ಅಭಿಮನ್ಯು ಆನೆಗೆ ವಯಸ್ಸಾದ ಕಾರಣದಿಂದ ವಿಶ್ರಾಂತಿ ನೀಡಲಾಗಿದ್ದು, ಪುಷ್ಪಾರ್ಚನೆ ಮಾಡುವ ಮೂಲಕ ಸಾಂಪ್ರದಾಯಿಕವಾಗಿ ಬೀಳ್ಕೊಡಲಾಯಿತು. ಸಹ ಆನೆಗಳು ಸಲ್ಯೂಟ್ ಹೊಡೆಯುವ ಮೂಲಕ ಸಹಪಾಠಿ ಆನೆಗೆ ಗೌರವ ಸಲ್ಲಿಸಿದವು. ಅಭಿಮನ್ಯುವಿನ ಮುಗ್ಧತನ ಕಂಡು ಮಾವುತರು ಮತ್ತು ಕಾವಾಡಿಗಳು ಭಾವುಕರಾದರು.
ದಸರಾ ಗಜಪಡೆಯಲ್ಲಿ ಪಾಲ್ಗೊಳ್ಳುವ ಅಲಂಕೃತ ಆನೆಗಳಿಗೆ ಸಚಿವ ಡಾ. ಯತೀಂದ್ರ ಸಿದ್ಧರಾಮಯ್ಯ, ಶಾಸಕರು ಮತ್ತು ಜಿಲ್ಲಾಡಳಿತ ಬೆಳಿಗ್ಗೆ 10 ಗಂಟೆಯಿಂದ 10.28ರ ನಡುವೆ ಸಲ್ಲುವ ತುಲಾ ಶುಭ ಲಗ್ನದಲ್ಲಿ ಸಂಪ್ರದಾಯದಂತೆ ಪೂಜೆ ಮಾಡಿ ಪುಷ್ಪಾರ್ಚನೆ ಮಾಡಿದರು.
ಬಳಿಕ ಆನೆಗಳಿಗೆ ಕಬ್ಬು, ಅಕ್ಕಿ, ಬೆಲ್ಲ ತಿನ್ನಿಸಿದರು. ಈ ವೇಳೆ ಆನೆಗಳು ಸೆಲ್ಯೂಟ್ ಮಾಡಿ ಗೌರವ ಸಮರ್ಪಿಸಿದವು. ಬೂದುಗುಂಬಳ ಹೊಡೆದು ಗಜಪಯಣಕ್ಕೆ ಹಸಿರು ನಿಶಾನೆ ತೋರಿದರು.
ಮೊದಲ ತಂಡದಲ್ಲಿ 12 ಆನೆಗಳು: ಮೊದಲ ತಂಡದಲ್ಲಿ 12 ಆನೆಗಳನ್ನು ದಸರಾ ಮಹೋತ್ಸವಕ್ಕೆ ಆಯ್ಕೆ ಮಾಡಿದ್ದು, ದುಬಾರೆಯ ಧನಂಜಯ, ಪ್ರಶಾಂತ, ಏಕಲವ್ಯ, ಶ್ರೀರಾಮ, ಕಾವೇರಿ, ಶ್ರೀಕಂಠ, ಮಹೇಂದ್ರ, ಲಕ್ಷ್ಮಿ, ಪ್ರಶಾಂತ ಆನೆಗಳಿಗೆ ಪೂಜೆ ಸಲ್ಲಿಸಿ ಕರೆತರಲಾಗುತ್ತಿದೆ.
ಉಳಿದ ಮೂರು ಆನೆಗಳನ್ನು ಎರಡನೇ ಹಂತದಲ್ಲಿ ಕರೆತರಲಾಗುವುದು ಎಂದು ತಿಳಿದು ಬಂದಿದೆ.
ಕಳೆದ ಆರೇಳು ವರ್ಷಗಳಿಂದ ದಸರಾ ಉತ್ಸವಗಳಲ್ಲಿ 14 ಆನೆಗಳನ್ನು ಕರೆತರಲಾಗಿತ್ತು. ಆದರೆ, ಈ ಬಾರಿಯ ದಸರೆಗೆ 12 ಆನೆಗಳನ್ನು ಆಯ್ಕೆ ಮಾಡಲಾಗಿದೆ.
ದಸರಾ ಆಚರಣೆಯ ಮೊದಲ ಕಾರ್ಯಕ್ರಮ ಇದಾಗಿದ್ದು, ಇಂದಿನಿಂದ ದಸರಾ ಮಹೋತ್ಸವದ ಸಿದ್ಧತೆಗಳು ಆರಂಭಗೊಂಡಂತಾಗಿದೆ. ಇದೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಿಕ್ಕಿರಿದು ಸೇರಿದ್ದರು.
ದಸರಾ ಗಜಪಯಣ ಆರಂಭ ಹಿನ್ನೆಲೆಯಲ್ಲಿ ವೀರನಹೊಸಹಳ್ಳಿ ಗ್ರಾಮ ತಳಿರು ತೋರಣಗಳಿಂದ ಸಿಂಗಾರಗೊಂಡಿತ್ತು. ಮಾವುತರು ಮತ್ತು ಕಾವಾಡಿ ಮಕ್ಕಳು ಹಾಗೂ ಕುಟುಂಬದವರು ಗಜಪಯಣದೊಂದಿಗೆ ಮೈಸೂರಿನತ್ತ ಪ್ರಯಾಣ ಬೆಳೆಸಲು ಎಲ್ಲಾ ಸಾಮಗ್ರಿಗಳನ್ನು ಹೊತ್ತು ತಂದು ಸಿದ್ಧರಾಗಿದ್ದರು.
ಗಜಪಯಣದ ಬೀಳ್ಕೊಡುಗೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಿದವು. ವೀರಗಾಸೆ, ಕಂಸಾಳೆ, ಪಟದ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತದೊಂದಿಗೆ ಹಾಡಿಮಕ್ಕಳ ಅರಣ್ಯ ಕುಣಿತ ಕಣ್ಮನ ಸೆಳೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜಿ. ಡಿ. ಹರೀಶ್ ಗೌಡ ವಹಿಸಿದ್ದರು. ಶಾಸಕರಾದ ಡಿ. ರವಿಶಂಕರ್, ವಿಧಾನಪರಿಷತ್ ಸದಸ್ಯ ಸಿ. ಎನ್. ಮಂಜೇಗೌಡ, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಜಿ. ಪಂ. ಸಿಇಒ ಯುಕೇಶ್ ಕುಮಾರ್, ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿಸಿಎಫ್ ಪ್ರಭುಗೌಡ, ಸಿಸಿಎಫ್ ಮೀನಾಕ್ಷಿ ನೇಗಿ, ಎಸಿಎಫ್ ಕಿರಣ್ ಕುಮಾರ್, ಮಾಜಿ ಶಾಸಕ ಎಂ. ಕೆ. ಸೋಮಶೇಖರ್, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಹುಣಸೂರು ಡಿವೈಎಸ್ಪಿ ರವಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಮೊದಲ ತಂಡದಲ್ಲಿ 9 ಆನೆಗಳು
ಮೊದಲ ತಂಡದಲ್ಲಿ ಎರಡು ಹೆಣ್ಣಾನೆಗಳು ಸೇರಿದಂತೆ ಒಟ್ಟು 9 ಆನೆಗಳ ತಂಡ ಪಯಣ ಬೆಳೆಸಿದವು. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮತ್ತಿಗೋಡು ಆನೆ ಶಿಬಿರದ ಮಹೇಂದ್ರ, ಭೀಮನಕಟ್ಟೆ ಆನೆ ಶಿಬಿರದ ಲಕ್ಷ್ಮಿ, ಕೊಡಗಿನ ಮಡಿಕೇರಿ ವಿಭಾಗದ ದುಬಾರೆ ಶಿಬಿರದ ಧನಂಜಯ, ಪ್ರಶಾಂತ್, ಏಕಲವ್ಯ, ಕಾವೇರಿ, ಗೋಪಿ, ಶ್ರೀರಾಮ, ಶ್ರೀಕಂಠ ಆನೆಗಳು ಮೈಸೂರಿನತ್ತ ತೆರಳಿದವು.
ದಸರಾ ಮಹೋತ್ಸವದ ಸಾರಥಿಯಾಗಿ ಆರು ಬಾರಿ ಚಾಮುಂಡೇಶ್ವರಿ ದೇವಿ ಅಲಂಕೃತಗೊಂಡು ವಿರಾಜಮಾನಳಾಗಿ ಕೂರುವ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುತ್ತಿದ್ದ ಅಭಿಮನ್ಯು (62) ಆನೆಗೆ ಗೌರವದ ವಿದಾಯ ಸಲ್ಲಿಸಲಾಯಿತು.
ಕ್ಯಾಪ್ಟನ್ ಅಭಿಮನ್ಯು ಬುಧವಾರವೂ ಸಹ ಕ್ಯಾಪ್ಟನ್ ಆಗಿಯೇ ದಸರಾ ಮಹೋತ್ಸವದಿಂದ ವಿಶ್ರಾಂತಿ ಪಡೆಯಿತು. ಅಭಿಮನ್ಯುವಿಗೆ ಪುಷ್ಪಾರ್ಚನೆ ಮಾಡಿ ಸಹ ಆನೆಗಳು ಸಲ್ಯೂಟ್ ಹೊಡೆದು ಸಾಂಪ್ರದಾಯಿಕವಾಗಿ ಬೀಳ್ಕೊಟ್ಟವು.
ಅಭಿಮನ್ಯು ದಸರಾ ಸಾರಥಿ ಸ್ಥಾನದಿಂದ ವಿಶ್ರಾಂತಿ ಪಡೆದಿರುವುದಕ್ಕೆ ಹಲವರಲ್ಲಿ ಬೇಸರವಿದೆ. ಆದರೆ ವಯಸ್ಸಿನ ಕಾರಣದಿಂದ ಅದಕ್ಕೆ ವಿಶ್ರಾಂತಿ ನೀಡಲಾಗಿದೆ.
ಯಾರಾಗುತ್ತಾರೆ ದಸರಾ ಸಾರಥಿ?
ಈ ಬಾರಿಯ ದಸರಾ ಮಹೋತ್ಸವದ ಸಾರಥಿಯಾಗಿ ಯಾವ ಆನೆಯನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಮಹೇಂದ್ರ, ಏಕಲವ್ಯ, ಪ್ರಶಾಂತ ಮತ್ತು ಭೀಮಾ ಆನೆಗಳಲ್ಲಿ ಯಾವ ಆನೆಯನ್ನು ರಾಜ್ಯ ಸರ್ಕಾರ ಆಯ್ಕೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಭೀಮಾ ಆನೆ ಮದದ ಕಾರಣದಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗಿಲ್ಲ. ಎರಡನೇ ತಂಡದಲ್ಲಿ ಇದನ್ನು ಕರೆದುಕೊಂಡು ಬಂದು ಅಂಬಾರಿ ಹೊರಿಸಬಹುದೇ ಎಂದು ನೋಡಬೇಕಿದೆ.






