ಜಯದೇವ ಆಸ್ಪತ್ರೆ ವಿರುದ್ಧ ತಪ್ಪು ಮಾಹಿತಿ ರವಾನೆಯಾದರೆ ಖಾಸಗಿ ಆಸ್ಪತ್ರೆಗಳಿಗೆ ಲಾಭವಾಗುತ್ತದೆ : ಸಚಿವ ಶರಣಪ್ರಕಾಶ್ ಪಾಟೀಲ್

ಮೈಸೂರು : ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 11 ರೋಗಿಗಳ ಸಾವು ಪ್ರಕರಣ ಸಂಬಂಧ ಇನ್ನೆರಡು ತಿಂಗಳಲ್ಲಿ ಸಿಬ್ಬಂದಿಗಳ ಕೊರತೆ ನಿವಾರಣೆ ಮಾಡುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಹತ್ತಾರು ವರ್ಷಗಳ ಸಾವಿನ ಪ್ರಮಾಣ ನೋಡಿದರೆ ಶೇ.4 ರಿಂದ 5 ಇದೆ. ಒಂದೇ ದಿನ 11 ಜನ ಸಾವಿನ ಬಗ್ಗೆ ಮಾಹಿತಿ ಕೇಳಿದ್ದೇನೆ. ಜಯದೇವ ಆಸ್ಪತ್ರೆ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಮಾದರಿಯಾಗಿದೆ. ಸಾವಿನ ಬಗ್ಗೆ ಲೋಪದೋಷ ಇದ್ದರೆ ವೈದ್ಯರ ಬಳಿ ಮಾಹಿತಿ ಕೇಳಿ ನಾವು ಅದರ ಮಾಹಿತಿ ಕೊಡುತ್ತೇವೆ ಎಂದರು.
ಜಯದೇವ ಆಸ್ಪತ್ರೆ ವಿರುದ್ಧ ತಪ್ಪು ಮಾಹಿತಿ ರವಾನೆಯಾದರೆ ಖಾಸಗಿ ಆಸ್ಪತ್ರೆಗಳಿಗೆ ಲಾಭವಾಗುತ್ತದೆ. ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಕೊಡುವುದನ್ನು ನಾವು ಮಾಡಿದ್ದೇವೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಚಿಕಿತ್ಸೆ ಕೊಡುತ್ತೇವೆ. ಸಾವಿನ ಬಗ್ಗೆ ನಿಖರ ಮಾಹಿತಿ ಕೇಳಿದ್ದೇನೆ. ಕಲಬುರಗಿ, ಮೈಸೂರು ಎಲ್ಲವನ್ನು ಬೆಂಗಳೂರಿನಿಂದ ಹ್ಯಾಂಡಲ್ ಮಾಡ್ತೇವೆ. ಹೀಗಾಗಿ ಕಲಬುರಗಿ ಹಾಗೂ ಮೈಸೂರು ಜಯದೇವ ಆಸ್ಪತ್ರೆಗಳಿಗೆ ಸ್ವತಂತ್ರ ನಿರ್ಧಾರ ಕೈಗೊಳ್ಳಲು, ತೀರ್ಮಾನ ಮಾಡಲು ಅಧಿಕಾರ ಕೊಡಲು ತೀರ್ಮಾನ ಮಾಡಿದ್ದೇವೆ. ಕೆಲ ನಿರ್ಧಾರಗಳನ್ನ ಸ್ಥಳೀಯವಾಗಿಯೇ ಕೈಗೊಳ್ಳಬೇಕಿದೆ. ಇನ್ನೆರಡು ತಿಂಗಳಲ್ಲಿ ಸಿಬ್ಬಂದಿಗಳ ಕೊರತೆ ನಿವಾರಣೆಯಾಗುತ್ತದೆ ಎಂದರು.






