ಉದಯಗಿರಿ ಕಲ್ಲುತೂರಾಟ ಪ್ರಕರಣ | ಪೊಲೀಸರು ಅಮಾಯಕರನ್ನು ಬಂಧಿಸುತ್ತಿದ್ದಾರೆ : ಎಂ.ಲಕ್ಷ್ಮಣ್ ಆರೋಪ
"ಒಂದು ಸಾವಿರ ಜನರ ಮೇಲೆ ಎಫ್‌ಐಆರ್ ಹಾಕಿದ್ದಾರೆ"

ಮೈಸೂರು: ಉದಯಗಿರಿ ಪೊಲೀಸ್ ಠಾಣೆ ಎದುರು ನಡೆದ ಕಲ್ಲು ತೂರಾಟ ಘಟನೆ ಸಂಬಂಧ ನೂರಾರು ಅಮಾಯಕ ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಪೊಲೀಸರು ತಮ್ಮ ಕರ್ತವ್ಯ ಲೋಪವನ್ನು ಮುಚ್ಚಿಕೊಳ್ಳಲು ಬರೋಬ್ಬರಿ ಒಂದು ಸಾವಿರ ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಠಾಣೆಯ ಮೇಲೆ ಕಲ್ಲು ತೂರಾಟ ನಡೆದಿಲ್ಲ, ಜನರ ನಡುವೆ ಅವಿತಿದ್ದ ಆರೆಸ್ಸೆಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದು, ಪೊಲೀಸರು ಸೂಕ್ತವಾದ ತನಿಖೆ ನಡೆಸಬೇಕು, ಯಾವುದೇ ಕಾರಣಕ್ಕೂ ಅಮಾಯಕರನ್ನು ಬಂಧಿಸಬಾರದು ಎಂದು ಆಗ್ರಹಿಸಿದರು.
ಕಲ್ಲು ತೂರಾಟ ಘಟನೆಗೂ ಮುನ್ನ ಧರ್ಮನಿಂದನೆ ಪೋಸ್ಟ್ ಹಾಕಿದ್ದ ಪಾಂಡುರಂಗ ಅಲಿಯಾಸ್ ಸತೀಶ್ ಎಂಬಾತನನ್ನು ಠಾಣೆಗೆ ಕರೆತಂದ ಪೊಲೀಸರು ಸೂಕ್ತ ವಿಚಾರಣೆ ನಡೆಸದೆ ಆತನಿಗೆ ಕಾಫಿ, ತಿಂಡಿ ಕೊಟ್ಟು ರಾಜಾತಿಥ್ಯ ನೀಡಿದ್ದರು. ದೂರು ನೀಡಲು ಬಂದವರಿಗೆ ಇಂತಹದ್ದೆಲ್ಲ ಮಾಮೂಲು ಇದಕ್ಕೆಲ್ಲ ಎಫ್‌ಐಆರ್ ಹಾಕುತ್ತಾ ಕೂರಲು ಸಾಧ್ಯವೇ? ಎಂದು ಉಡಾಫೆಯಾಗಿ ಉತ್ತರಿಸಿದ್ದನ್ನು ಕಂಡು ಜನರು ಕುಪಿತರಾಗಿ ಪ್ರತಿಭಟನೆ ನಡೆಸಿದ್ದಾರೆ. ಇದೇ ಸಂದರ್ಭವನ್ನು ಕಾಯುತ್ತಿದ್ದ ಆರೆಸ್ಸೆಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ ಅದರ ಆರೋಪಗಳು ಮುಸ್ಲಿಂ ಸಮುದಾಯದ ಮೇಲೆ ಬರುವಂತೆ ವ್ಯವಸ್ಥಿತವಾಗಿ ಸಂಚು ನಡೆಸಿದ್ದಾರೆ ಎಂದು ಹೇಳಿ, ಆರೋಪಿ ಪಾಂಡುರಂಗ ಅಲಿಯಾಸ್ ಸತೀಶ್ ಎಂಬಾತನು ಆರೆಸ್ಸೆಸ್ ಬೈಠಕ್‌ನಲ್ಲಿ ಭಾಗವಹಿಸಿರುವ ಭಾವಚಿತ್ರಗಳನ್ನು ಪ್ರದರ್ಶಿಸಿದರು.
ಕಮೀಷನರ್ ಎದುರು ಕುಳಿತ ರೌಡಿಶೀಟರ್ :
ʼವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ಇಲ್ಲಿಗೆ ಬಂದು ಪೊಲೀಸ್ ಠಾಣೆಯಲ್ಲಿ ಸಭೆ ಮಾಡಿದ್ದಾರೆ. ಇವರನ್ನು ಪೊಲೀಸರು ಇಲ್ಲಿಗೆ ಬಿಟ್ಟಿದ್ದೇ ತಪ್ಪುʼ ಎಂದು ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದರು.
ʼಒಬ್ಬ ವಿರೋಧ ಪಕ್ಷದ ನಾಯಕರಾಗಿ ಅಶೋಕ್ ಅವರು, ಧರ್ಮ ನಿಂದನೆ ಪೋಸ್ಟ್ ಹಾಕಿದ್ದ ವ್ಯಕ್ತಿಯ ಬಗ್ಗೆ ಸೂಕ್ತ ವಿಚಾರಣೆ ನಡೆಸಿ ಎಂದು ಪೊಲೀಸರಿಗೆ ತಿಳಿವಳಿಕೆ ನೀಡುವ ಬದಲು ಕೇವಲ ಮುಸ್ಲಿಂ ಸಮುದಾಯದ ವಿರುದ್ಧ ಮಾತನಾಡಿದ್ದಾರೆ. ಅಲ್ಲದೇ, ಮಾಜಿ ಸಂಸದ ಪ್ರತಾಪ್ ಸಿಂಹ ತಮ್ಮ ಜೊತೆ ರೌಡಿಶೀಟರ್ ರಾಕೇಶ್‌ಗೌಡ ಅಲಿಯಾಸ್ ರಾಕಿ ಎಂಬಾತನನ್ನು ಕರೆತಂದು ಪೊಲೀಸ್ ಆಯುಕ್ತರು, ಉಪ ಆಯುಕ್ತರ ಎದುರು ಕುರ್ಚಿಯಲ್ಲಿ ಕೂರಿಸಿದ್ದಾರೆ. ಈ ರೌಡಿಶೀಟರ್ ಬಗ್ಗೆ ಗೊತ್ತಿದ್ದರೂ ಹಿರಿಯ ಪೊಲೀಸ್ ಅಧಿಕಾರಿಗಳು ಇವನ ಎದುರು ಘಟನಾವಳಿ ಬಗ್ಗೆ ಚರ್ಚೆ ಮಾಡಿದ್ದಾರೆ. ಇದು ನಾಚಿಕೆಗೇಡಿನ ವಿಷಯʼ ಎಂದರು.







