ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಹಗರಣ ನಡೆದಿದೆ ಎಂಬ ಬಿಜೆಪಿ-ಜೆಡಿಎಸ್ ಆರೋಪ ನಿರಾಧಾರ : ಎಂ.ಲಕ್ಷ್ಮಣ್

ಮೈಸೂರು : ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ 15,568 ಕೋಟಿ ರೂ. ಹಗರಣ ನಡೆದಿದೆ ಎಂದು ಬಿಜೆಪಿ-ಜೆಡಿಎಸ್ ನಾಯಕರ ಆರೋಪ ನಿರಾಧಾರ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯ ಒಟ್ಟು ಅನುದಾನವೇ 1568 ಕೋಟಿ ರೂ., 15568 ಕೋಟಿ ರೂ. ಎಲ್ಲಿಂದ ಬಂತು? ಬಿಜೆಪಿ ನಾಯಕರು ಉತ್ತರಿಸುವಂತೆ ಲಕ್ಷ್ಮಣ್ ಆಗ್ರಹಿಸಿದರು.
2019ರಲ್ಲಿ ಬಿಜೆಪಿ ಸರಕಾರ ಸ್ಮಾರ್ಟ್ ಮೀಟರ್ ಯೋಜನೆಯನ್ನು ದೇಶಾದ್ಯಂತ ಜಾರಿ ಮಾಡಿತು. ಸ್ಮಾರ್ಟ್ ಮೀಟರ್ ಹಗರಣದ ಕೀರ್ತಿ ಬಿಜೆಪಿ ನಾಯಕರಿಗೆ ಸಲ್ಲುತ್ತದೆ ಎಂದು ತಿರುಗೇಟು ನೀಡಿದರು.
ಕರ್ನಾಟಕದಲ್ಲಿ ಸ್ಮಾರ್ಟ್ ಮೀಟರ್‌ಗೆ 4,998 ರೂ. ಗಳನ್ನು ಮಾತ್ರ ಪಡೆಯುತ್ತಿದೆ. ನಿರ್ವಹಣೆ ವೆಚ್ಚವನ್ನು ಮಾಸಿಕ 75 ರೂ. ಸ್ವೀಕರಿಸಲಾಗುತ್ತಿದೆ. ರಾಜ್ಯದಲ್ಲಿ 4 ಲಕ್ಷ ಮೀಟರ್‌ಗಳನ್ನು ಹೊಸದಾಗಿ ನಿರ್ಮಿಸಿರುವ ಮನೆಗಳಿಗೆ ಮಾತ್ರ ಅಳವಡಿಸಲಾಗುತ್ತಿದೆ. ಈಗಾಗಲೇ ಮೀಟರ್ ಇರುವವರು ಬೇಕಾದರೆ, ಸ್ಮಾರ್ಟ್ ಮೀಟರ್ ಹಾಕಿಸಿಕೊಳ್ಳಬಹುದಾಗಿದೆ ಎಂದರು.
ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಗುತ್ತಿಗೆ ಕರೆದು ಮೂರು ಕಂಪನಿಗಳನ್ನು ತಿರಸ್ಕರಿಸಿ, ರಾಜಶ್ರೀ ಎಲೆಕ್ಟ್ರಿಕಲ್ಸ್ ಅವರಿಗೆ ನೀಡಲಾಗಿದೆ. ಸಹ್ಯಾದ್ರಿ ಎಲೆಕ್ಟ್ರಿಕಲ್ಸ್ ಕಂಪನಿಗೆ ಗುತ್ತಿಗೆ ತಿರಸ್ಕಾರವಾಗುತ್ತಿದ್ದಂತೆಯೇ ಬಿಜೆಪಿ ಶಾಸಕ ಅಶ್ವಥ್ ನಾರಾಯಣ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಹ್ಯಾದ್ರಿ ಕಂಪನಿಯೊಂದಿಗೆ ತಮ್ಮ ಸಂಬಂಧವನ್ನು ಬಹಿರಂಗಪಡಿಸುವಂತೆ ಲಕ್ಷ್ಮಣ್ ಒತ್ತಾಯಿಸಿದರು.
ನಮ್ಮ ಸರಕಾರದ ಮೇಲೆ ಕಮಿಷನ್ ಆರೋಪ ಮಾಡುತ್ತಿರುವ ಬಿಜೆಪಿ ನಾಯಕರು ಬಹುತೇಕ ಬೇರೆ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಲು ಗುತ್ತಿಗೆ ಪಡೆದು ಬಹುದೊಡ್ಡ ಹಗರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ರಾಜ್ಯದಲ್ಲಿ ಬಿಜೆಪಿ ನಾಯಕರಿಗೆ ಬೇಕಿರುವುದು ಕೋಮುವಾದ. ಹಿಂದೂ-ಮುಸ್ಲಿಮರ ನಡುವೆ ಜಗಳ ಸೃಷ್ಟಿಸುವುದು ವಿನಹ ಬೇರೇನು ಇಲ್ಲ. ಬಿಜೆಪಿಯ ಎಲ್ಲ ಶಾಸಕರು ಮುಸ್ಲಿಮರೊಂದಿಗೆ ವ್ಯವಹಾರ ಮಾಡುತ್ತಾರೆ, ಆದರೆ ಮಾಧ್ಯಮದ ಮುಂದೆ ಬಂತು ಅವರಿಗೆ ಬೈಯುತ್ತಾರೆ ಎಂದು ಹೇಳಿದರು.
ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ನಟ ಕಮಲ್ ಹಾಸನ್ ಹೇಳಿಕೆ ವಿಚಾರವಾಗಿ ಮಾತನಾಡಿದ ಎಂ.ಲಕ್ಷ್ಮಣ್, ಕಮಲ್ ಹಾಸನ್ ಹೇಳಿಕೆ ದುರಂತದ ಸಂಗತಿಯಾಗಿದೆ. ಅವರು ಕನ್ನಡಿಗರ ಕ್ಷಮೇ ಕೇಳಲೇಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಮಾಧ್ಯಮ ವಕ್ತಾರ ಕೆ.ಮಹೇಶ್, ಸೇವಾದಳ ಗಿರೀಶ್ ಮೊದಲಾದವರು ಇದ್ದರು.
ರಾಜ್ಯದಲ್ಲಿ ಶಾಂತಿ ಕಾಪಾಡಲು ಕರಾವಳಿ ಭಾಗದಲ್ಲಿರುವ 6 ಬಿಜೆಪಿ ಶಾಸಕರನ್ನು ದೇಶದ್ರೋಹ ಕಾಯಿದೆಯಡಿ ಬಂಧಿಸಬೇಕು ಅಥವಾ ಗಡಿಪಾರು ಮಡಬೇಕು. ವಿಪಕ್ಷ ನಾಯಕ ಆರ್.ಅಶೋಕ್, ಸಿ.ಟಿ.ರವಿ ಅವರನ್ನು ಬಂಧಿಸಬೇಕು. ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲು ಹಾಕುವ ಬುದ್ಧಿಯವರು. ಅವರ ವಿರುದ್ಧ ದೂರು ದಾಖಲಿಸಿದರೆ ನ್ಯಾಯಾಲಯದಿಂದ ಸ್ಟೇ ತರುತ್ತಾರೆ. ಶಾಂತಿ ಕಾಪಾಡುವುದು ಹೇಗೆ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂಗಳಿಗೆ ಸಮಸ್ಯೆಯಾಗಿಲ್ಲ. ಬಿಜೆಪಿಯವರಿಗೆ ಸಮಸ್ಯೆಯಾಗಿದೆ.
ಎಂ.ಲಕ್ಷ್ಮಣ್, ಕೆಪಿಸಿಸಿ ವಕ್ತಾರ