ಮೈಸೂರು | ರಾತ್ರೋ ರಾತ್ರಿ ಕೆಂಪೇಗೌಡರ ಕಂಚಿನ ಪ್ರತಿಮೆ ಪ್ರತಿಷ್ಠಾಪನೆ : ಸ್ಥಳದಲ್ಲಿ ಬಿಗುವಿನ ವಾತಾವರಣ

ಮೈಸೂರು : ಮೈಸೂರಿನ ಲಲಿತಮಹಲ್ ರಸ್ತೆಯಲ್ಲಿರುವ ಕೆಂಪೇಗೌಡ ವೃತ್ತದಲ್ಲಿ ರಾತ್ರೋ ರಾತ್ರಿ ನಾಡಪ್ರಭು ಕೆಂಪೇಗೌಡರ ಅವರ ಕಂಚಿನ ಪ್ರತಿಮೆಯನ್ನು ಕೆಂಪೇಗೌಡ ಅವರ ಅಭಿಮಾನಿಗಳು ಪ್ರತಿಷ್ಠಾಪನೆ ಮಾಡಿದ್ದಾರೆ.
ಈ ಹಿಂದೆ ಇದೇ ವೃತ್ತದಲ್ಲಿ ಪ್ರತಿಮೆ ಪ್ರತಿಷ್ಠಾಪನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಸಹ ನಡೆದಿತ್ತು. ಈಗ ಶನಿವಾರ ಮಧ್ಯರಾತ್ರಿ 2 ಗಂಟೆಯಲ್ಲಿ ವಾಹನದಲ್ಲಿ ಕಂಚಿನ ಪ್ರತಿಮೆ ತಂದು ಪ್ರತಿಷ್ಠಾಪನೆ ಮಾಡಿದ್ದಾರೆ.
ಈ ಮಧ್ಯೆ ರಾತ್ರೋ ರಾತ್ರಿ ಪ್ರತಿಮೆ ತಂದು ಪ್ರತಿಷ್ಠಾಪಿಸಿರುವುದರಿಂದ ಸಾಕಷ್ಟು ಅನುಮಾನ ವ್ಯಕ್ತವಾಗಿ ಸ್ಥಳಕ್ಕೆ ಪೊಲೀಸರು ಆಗಮಿಸಿದರು. ಪ್ರತಿಮೆ ತೆರೆವುಗೊಳಿಸುವ ವೇಳೆ ಪೊಲೀಸರು ಹಾಗೂ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಸಕ ಹರೀಶ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಮಹಾನಗರಪಾಲಿಕೆಯಲ್ಲಿ ಅನುಮತಿ ಪಡೆದು ಪ್ರತಿಮೆ ಪ್ರತಿಷ್ಠಾಪನೆ ಮಾಡುವುದಾಗಿ ಭರವಸೆ ನೀಡಿದರು.ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಯಿತು.





