ಮೈಸೂರು | ಆಟೋದಲ್ಲಿ ಹೋಗುತ್ತಿದ್ದ ನಾಲ್ವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ; ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಡುರಸ್ತೆಯಲ್ಲೇ ಮಚ್ಚು ಝಳಪಿಸಿದ ದುಷ್ಕರ್ಮಿಗಳು

ಮೈಸೂರು : ಆಟೋದಲ್ಲಿ ಹೋಗುತ್ತಿದ್ದ ಮೂವರು ಮಹಿಳೆಯರು ಓರ್ವ ಪುರುಷನ ಮೇಲೆ ಕಾರಿನಲ್ಲಿ ಬಂದ ನಾಲ್ವರ ತಂಡ ನಡು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಮೈಸೂರು ನಗರದ ಅಗ್ರಹಾರ ಬಳಿಯ ರಾಮಾನುಜ ರಸ್ತೆಯಲ್ಲಿ ಗುರುವಾರ ರಾತ್ರಿ 10 ಗಂಟೆ ಸಮಯದಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನು ರಾಜನ್ (38), ಪತ್ನಿ ಕುಮುದ, ವಿಶಾಲಾಕ್ಷಿ, ರೇಣುಕಮ್ಮ ಎಂದು ಹೇಳಲಾಗಿದೆ. ಗಂಭೀರವಾಗಿ ಗಾಯಗೊಂಡ ಇವರನ್ನು ತಕ್ಷಣ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಕಳೆದ ಒಂದು ವರ್ಷದ ಹಿಂದೆ ರಾಜನ್ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಇಂದು(ಗುರುವಾರ) ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ಮಾತುಕತೆಗಾಗಿ ಹೋಗಿ ವಾಪಸ್ ಆಟೋದಲ್ಲಿ ಬರುವಾಗ ಹಿಂಬದಿಯಿಂದ ಕಾರಿನಲ್ಲಿ ಫಾಲೋ ಮಾಡಿಕೊಂಡು ಬಂದ ರಾಮ, ಸೌಮ್ಯ, ಅಬ್ಬಯ್ಯ, ಪ್ರಸಾದ್ ಎಂಬವವರು ಮಚ್ಚು, ಲಾಂಗ್ ಸೇರಿದಂತೆ ಮಾರಕಾಸ್ತ್ರಗಳಿಂದ ಆಟೋದಲ್ಲಿದ್ದ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆ ನಡೆಸಿ ದುಷ್ಕರ್ಮಿಗಳು ಮಚ್ವು, ಲಾಂಗ್ ಹಿಡಿದು ನಡು ರಸ್ತೆಯಲ್ಲೇ ಝಳಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೋಗುತ್ತಿರುವುದು ಸಿಸಿ ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಕೆ.ಆರ್.ಪೊಲೀಸರು ಸ್ಥಳಕ್ಕೆ ಬಂದು ಹಲ್ಲೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕುತ್ತಿದ್ದಾರೆ.







