ಮೈಸೂರು | ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ 4ನೇ ಮಹಡಿಯಿಂದ ಕೆಳಗೆ ಬಿದ್ದು ವ್ಯಕ್ತಿ ಮೃತ್ಯು: ಮತ್ತೋರ್ವನಿಗೆ ಗಂಭೀರ ಗಾಯ

ಮೈಸೂರು , ಸೆ.8: ಕೆಲಸದ ವೇಳೆ ಆಯತಪ್ಪಿ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಬಿದ್ದು ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಮೈಸೂರಿನ ಬಿ.ಎಂ.ಹ್ಯಾಬಿಟೇಟ್ ಮಾಲ್‌ನಲ್ಲಿ ನಡೆದಿದೆ.
ಘಟನೆಯಲ್ಲಿ ಎಲೆಕ್ಟ್ರಿಷಿಯನ್ ಕೆಲಸಗಾರ ಸುನೀಲ್(27) ಸ್ಥಳದಲ್ಲೇ ಮೃತಪಟ್ಟಿದ್ದರೆ, ಈತನ ರಕ್ಷಣೆಗೆ ಮುಂದಾದ ಚಂದ್ರು ಸಹ ಕೆಳಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಗರದ ಜಯಲಕ್ಷ್ಮಿಪುರಂನಲ್ಲಿರುವ ಬಿ.ಎಂ.ಹ್ಯಾಬಿಟೇಟ್ ಮಾಲ್ ಕಟ್ಟಡದ ನಾಲ್ಕನೇ ಹಂತಸ್ತಿನಲ್ಲಿ ಬೋರ್ಡ್ ತೆರವು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಎಲೆಕ್ಟ್ರಿಷಿಯನ್ ಸುನೀಲ್, ಕಟ್ಟಡದ ಮೇಲೆ ಅಳವಡಿಸಿದ್ದ ಪಿಒಪಿ ಮೇಲೆ ಕಾಲಿಟ್ಟ ಪರಿಣಾಮ ಪಿಒಪಿ ಕುಸಿದಿದೆ. ಈ ವೇಳೆ ಸುನೀಲ್, ರಾಡ್‌ನ ಸಹಾಯದಿಂದ ನೇತಾಡುತ್ತಿದ್ದು, ಸುನೀಲ್ ರಕ್ಷಣೆಗೆ ಮುಂದಾದ ಚಂದ್ರು ಕೂಡ ಪಿಒಪಿ ಮೇಲೆ ಕಾಲಿಟ್ಟಿದ್ದರಿಂದ ನಿಯಂತ್ರಣ ಕಳೆದುಕೊಂಡು ಇಬ್ಬರು ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಸುನೀಲ್ ಸ್ಥಳದಲ್ಲೇ ಮೃತಪಟ್ಟರೆ, ಚಂದ್ರು ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಜಯಲಕ್ಷ್ಮಿಪುರಂ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ, ಮುಂದಿನ ಕ್ರಮಕೈಗೊಂಡಿದ್ದಾರೆ.





