ಮೈಸೂರು | ಶಾಲೆಯ ವಿದ್ಯಾರ್ಥಿ ಮೇಲೆ ರ್ಯಾಗಿಂಗ್, ಮರ್ಮಾಂಗಕ್ಕೆ ಹಲ್ಲೆ ಆರೋಪ: ಎಫ್ಐಆರ್ ದಾಖಲು

ಸಾಂದರ್ಭಿಕ ಚಿತ್ರ | PC : freepik
ಮೈಸೂರು : ನಗರದ ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿ ಮೇಲೆ ಮೂವರು ಸಹಪಾಠಿ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿ ಬಾಲಕನ ಮರ್ಮಾಂಗಕ್ಕೆ ಗಂಭೀರ ಹಲ್ಲೆ ನಡೆಸಿದ್ದು, ಈ ಸಂಬಂಧ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಗರದ ಜಯಲಕ್ಷ್ಮಿ ಪುರಂನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ 8ನೇ ತರಗತಿ ವ್ಯಾಸಂಗ ಮಾಡುತಿದ್ದ ಗಾಯಾಳು ವಿದ್ಯಾರ್ಥಿ ತರಗತಿಯ ಲೀಡರ್ ಆಗಿದ್ದನು. ಆ ವಿದ್ಯಾರ್ಥಿಗೆ ಇತರ ಮೂವರು ವಿದ್ಯಾರ್ಥಿಗಳು ಶಾಲೆಯ ಶೌಚಾಲಯದಲ್ಲಿ ಅಕ್ಟೋಬರ್ 26ರಂದು ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಬಾಲಕನ ಮರ್ಮಾಂಗಕ್ಕೆ ಪೆಟ್ಟಾಗಿರುವುದು ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಖಚಿತವಾಗಿದೆ. ಈ ಸಂಬಂಧ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ಬಗ್ಗೆ ಶಾಲೆಯವರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ವಿದ್ಯಾರ್ಥಿಯ ತಾಯಿ, ಈ ಸಂಬಂಧ ನವೆಂಬರ್ 9 ರಂದು ನಗರದ ಜಯಲಕ್ಷ್ಮಿ ಪುರಂ ಠಾಣೆಗೆ ತೆರಳಿ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಹಲ್ಲೆ ನಡೆಸಿದ ಮೂವರು ವಿದ್ಯಾರ್ಥಿಗಳ ವಿರುದ್ಧ ದೂರು ನೀಡಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿ ತನ್ನ ಮೇಲೆ ನಡೆದ ಹಲ್ಲೆ ಬಗ್ಗೆ ಮಾಹಿತಿ ನೀಡಿದ್ದಾನೆ. "ನಾನು ತರಗತಿಯಲ್ಲಿ ಲೀಡರ್ ಆಗಿದ್ದೆನು. ಹಲ್ಲೆ ಮಾಡಿದ ವಿದ್ಯಾರ್ಥಿಗಳು 'ತಮ್ಮ ವಿರುದ್ಧ ಶಿಕ್ಷಕರಿಗೆ ಚಾಡಿ ಹೇಳುತ್ತಿಯಾ?' ಎಂದು ಶೌಚಾಲಯದಲ್ಲಿ ನನ್ನ ಮೇಲೆ ಹಲ್ಲೆ ಮಾಡಿ ನನ್ನಿಂದ 3 ಸಾವಿರ ಹಣ ಪಡೆದಿದ್ದಾರೆಂದು" ಆರೋಪಿಸಿದ್ದಾನೆ.







