ಕೇರಳದ ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣ ಭೇದಿಸಿದ ಪೊಲೀಸರು; 7ಮಂದಿ ಬಂಧನ: ಮೂವರು ಆರೋಪಿಗಳ ಪತ್ತೆಗೆ ಶೋಧ

ಮೈಸೂರು : ಕೇರಳದ ಚಿನ್ನದ ವ್ಯಾಪಾರಿಯನ್ನು ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿಯನ್ನು ಮೈಸೂರು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಪ್ರಕರಣದಲ್ಲಿ ಭಾಗಿಯಾಗಿದ್ದ ಏಳು ಮಂಧಿಯನ್ನು ಬಂಧಿಸಲಾಗಿದ್ದು, ಪ್ರಮುಖ ಮೂವರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಿದರು.
ಕೇರಳದ ಮಹಮ್ಮದ್ ಹರ್ಷದ್(32), ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಸುಧಾಕರ್(42), ಜುನೈಲ್ ಅಬೀದ್(43), ನಿಶಾಮುದ್ದೀನ್(30), ಆಸೀಫ್ (31), ಉಬೈಸ್(35), ಟಿ.ಎಸ್.ಸೇಲ್ (32) ಬಂಧಿತರಾಗಿದ್ದು, ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಪ್ರಮುಖ ಆರೋಪಿಗಳಾದ ಕೇರಳದ ಮುನಾರ್, ರೈಸಲ್ ಬಾಬು ಮತ್ತು ಕುರ್ಕಾನ್ ಮುನಾರ್ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಮಾಹಿತಿ ನೀಡಿದರು.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಸಿಂಧುವಳ್ಳಿಪುರ ಗ್ರಾಮದ ಬಳಿ ಮೈಸೂರಿನಿಂದ ಕೇರಳಕ್ಕೆ ಕಾರಿನಲ್ಲಿ ಹೋಗುತ್ತಿದ್ದ ಚಿನ್ನದ ವ್ಯಾಪಾರಿಗಳಾದ ಅನ್ಸಿಲ್ ರೆಹಮಾನ್ ಮತ್ತು ಮುಖ್ಸುಬಲ್ ಹುಸೇನ್ ಅವರ ಕಾರಿಗೆ ಹಿಂಬದಿಯಿಂದ ಕಾರಿನಿಂದ ಬಂದು ಗುದ್ದಿ ಮುಂಭಾಗದಿಂದ ಮತ್ತೊಂದು ವಾಹನದಲ್ಲಿ ಬಂದ ಹಲವರು ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿದ್ದಾರೆ. ಅವರನ್ನು ಅಡ್ಡಗಟ್ಟಿ ಕಾರಿನಿಂದ ಚಿನ್ನದ ವ್ಯಾಪಾರಿಗಳು ಇಳಿದ ತಕ್ಷಣ ಕಾರು ಸಮೇತ ದರೋಡೆ ಮಾಡಿದ್ದರು.
ದರೋಡೆಯಾಗಿದ್ದ 85.7 ಲಕ್ಷ ರೂ. ನಗದಿನಲ್ಲಿ ಬಂಧಿತರಿಂದ 11.5 ಲಕ್ಷ ರೂ. ನಗದು ಸೇರಿದಂತೆ 49.5 ಲಕ್ಷ ರೂ. ವೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಎಸ್ಪಿಗಳಾದ ಸಿ.ಮಲ್ಲಿಕ್, ಎಲ್.ನಾಗೇಶ್ ಇದ್ದರು. ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಧರ್ಮೇಂದ್ರ, ನಂಜನಗೂಡು ಠಾಣೆ ಇನ್‌ಸ್ಪೆಕ್ಟರ್ ಎಸ್.ಆನಂದ್, ತಲಕಾಡು ಠಾಣೆ ಇನ್‌ಸ್ಪೆಕ್ಟರ್ ಶಿವನಂಜ ಶೆಟ್ಟಿ, ಎಸ್‌ಐ ಎಸ್.ಕಿಶೋರ್, ಸಿಬ್ಬಂದಿಗಳಾದ ಬಿ.ಸುರೇಶ್, ಅಬ್ದುಲ್ ಲತೀಫ್,ಚೆಲುವರಾಜು, ಶಿವಕುಮಾರ್, ರಾಹುಲ್ ಕಾಂಬ್ಳೆ, ಸುರೇಶ್, ಗಣೇಶ್, ನಾಗ ನಾಯಕ, ಮಂಜುನಾಥ್, ಸುಶೀಲ್ ಕುಮಾರ್, ಅನಿಲ್, ಗೋವಿಂದ ರಾಜು, ಮಹದೇವ ಸ್ವಾಮಿ, ಪ್ರಸನ್ನ, ವಸಂತ್ ಕುಮಾರ್, ಸುನೀತಾ ಇದ್ದರು.






