Mysore | ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ ಸಾವು : ಕುಟುಂಬಸ್ಥರ ಆಕ್ರೋಶ

ಡಾ.ದಿನೇಶ್
ಮೈಸೂರು : ಜಯದೇವ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಒಂದೇ ದಿನದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ, ಮೃತರ ಕುಟುಂಬಸ್ಥರು ಬುಧವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ʼರಾತ್ರಿ ವೈದ್ಯರು ಇರಲಿಲ್ಲ. ಸರಿಯಾದ ಮಾಹಿತಿಯೂ ನೀಡುವುದಿಲ್ಲ. ಅವರ ನಿರ್ಲಕ್ಷ್ಯದಿಂದ ಸಾವಾಗುತ್ತಿದೆ' ಎಂದು ಆರೋಪಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವಿ.ವಿ ಪುರಂ ಪೊಲೀಸರು ಆಗಮಿಸಿ, ಕುಟುಂಬಸ್ಥರನ್ನು ಸಮಾಧಾನಪಡಿಸಿದರು.
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ಹಾಗೂ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ದಿನೇಶ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಮೆಡಿಕಲ್ ಸೂಪರಿಟೆಂಡೆಂಟ್ ಡಾ.ಕೆ.ಎಸ್.ಸದಾನಂದ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. 'ಸಮಯ ಮೀರಿ ಬಂದ ಕಾರಣ ರೋಗಿಗಳು ಮೃತಪಟ್ಟಿದ್ದಾರೆ. ನಿತ್ಯ ಇದೇ ಪ್ರಮಾಣದಲ್ಲಿ ಮೃತರಾಗುತ್ತಿದ್ದಾರೆ. ಆರೋಪ ಮಾಡುತ್ತಿರುವವರೂ ರೋಗಿಯನ್ನು 12 ಗಂಟೆ ತಡವಾಗಿ ಕರೆತಂದಿದ್ದರು. ರಾತ್ರಿ ಮೂವರು ವೈದ್ಯರು ಇದ್ದರು. ಎಲ್ಲಾ ರೋಗಿಗಳನ್ನೂ ಆರೈಕೆ ಮಾಡಿದ್ದಾರೆ. ಆ ಕುರಿತ ಸಿಸಿ ಟಿವಿ ದೃಶ್ಯಗಳು ಇವೆʼ ಎಂದು ತಿಳಿಸಿದರು.
ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು : ಡಾ.ದಿನೇಶ್
ʼಮೃತ 11 ಮಂದಿಯೂ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ಗೋಲ್ಡನ್ ಅವರ್ ಮೀರಿ ಬಂದವರಾಗಿದ್ದರು. ತುಂಬಾ ವಯಸ್ಸಾಗಿದ್ದರುʼ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ದಿನೇಶ್ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇಲ್ಲ. ವೈದ್ಯರ ಕೊರತೆ ಸುಳ್ಳು ಆರೋಪ, ನಮ್ಮ ಆಸ್ಪತ್ರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಕೆಲವು ಕಡೆ ತಪ್ಪು ಸುದ್ದಿ ಹರಡಲಾಗಿದೆ. ಆಸ್ಪತ್ರೆಯಲ್ಲಿ 40 ಜನ ವೈದ್ಯರು ಇದ್ದಾರೆ, 24 ಜನ ಕಾರ್ಡೀಯೋಲಾಜಿಸ್ಟ್ ಇದ್ದಾರೆ , 10 ಅನಸ್ಥಾಸಿಯೇಸ್ಟ್ , ಒಬ್ಬರು ಸರ್ಜನ್ ಇದ್ದಾರೆ. ಪೋಸ್ಟ್ ಗ್ರ್ಯಾಜುಯೇಟ್ಸ್ 10 ಜನ ವೈದ್ಯರು ಇದ್ದಾರೆ ಎಂದು ಮಾಹಿತಿ ನೀಡಿದರು.
ಕಳೆದ ಬೇಸಿಗೆಯಿಂದ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ಶೇ.5 ರಿಂದ 8 ವೈದ್ಯರ ಅವಶ್ಯಕತೆ ಇದೆ. ರಾಜ್ಯಾದ್ಯಂತ 24 ವೈದ್ಯರ ಹುದ್ದೆ ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಸರಕಾರ ಒಂದು ತಿಂಗಳಲ್ಲಿ 200 ಬೆಡ್ ಕೊಟ್ಟಿದೆ, ಇದರಲ್ಲಿ 60 ಬೆಡ್ ಐಸಿಯು ಬರಲಿದೆ ಎಂದು ಹೇಳಿದರು.
ಐದು ತಿಂಗಳಲ್ಲಿ 499 ಸಾವು :
ಮೈಸೂರು : ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಜನವರಿ ತಿಂಗಳಿಂದ ಮೇ ತಿಂಗಳ ಅಂತ್ಯದವರೆಗೆ 499 ರೋಗಿಗಳು ಮೃತಪಟ್ಟಿದ್ದಾರೆ.
ಜನವರಿಯಲ್ಲಿ 20650 ಹೊರರೋಗಿಗಳು, 2092 ಒಳರೋಗಿಗಳು ದಾಖಲಾಗಿದ್ದು, 134 ಮಂದಿ ಮೃತಪಟ್ಟಿದ್ದಾರೆ. ಫೆಬ್ರವರಿಯಲ್ಲಿ 19341 ಹೊರರೋಗಿಗಳು, 1885 ಒಳರೋಗಿಗಳ ದಾಖಲಾಗಿದ್ದು, 94 ರೋಗಿಗಳು ಸಾವಿಗೀಡಾಗಿದ್ದಾರೆ. ಮಾರ್ಚ್ ತಿಂಗಳಲ್ಲಿ 19435 ಒಳರೋಗಿಗಳು, 1771 ಒಳರೋಗಿಗಳು ದಾಖಲಾಗಿದ್ದು, 94 ರೋಗಿಗಳು ನಿಧನರಾಗಿದ್ದಾರೆ. ಎಪ್ರಿಲ್ ತಿಂಗಳಲ್ಲಿ19723 ಹೊರರೋಗಿಗಳು, 1771 ಒಳರೋಗಿಗಳು ದಾಖಲಾಗಿದ್ದು, 91 ರೋಗಿಗಳು ಮೃತಪಟ್ಟಿದ್ದಾರೆ. ಮೇ ತಿಂಗಳಲ್ಲಿ 21481 ಹೊರರೋಗಿಗಳು, 1871 ಒಳರೋಗಿಗಳು ದಾಖಲಾಗಿದ್ದು, 86 ರೋಗಿಗಳು ನಿಧನರಾಗಿದ್ದಾರೆ.
2025ರಲ್ಲಿ 1245 ರೋಗಿಗಳು ಸಾವು :
ಮೈಸೂರು : 2025ರಲ್ಲಿ 239941 ಹೊರ ರೋಗಿಗಳು, 21577 ರೋಗಿಗಳು ಚಿಕಿತ್ಸೆ ಪಡೆದಿದ್ದು, 1245 ರೋಗಿಗಳು ಮೃತಪಟ್ಟಿದ್ದಾರೆ. ಮರಣ ಪ್ರಮಾಣ ಶೇ. 5.77 ಇರುವುದಾಗಿ ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
16 ದಿನಗಳಲ್ಲಿ 62 ಸಾವು
ಮೈಸೂರು: ಜಯದೇವ ಆಸ್ಪತ್ರೆಯ ಜೂನ್ 1ರಿಂದ 16ರವರೆಗೆ 12273 ಹೊರರೋಗಿಗಳು, 1037 ಒಳ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದು, 62 ರೋಗಿಗಳು ಮೃತಪಟ್ಟಿದ್ದಾರೆ. ಮರಣ ಪ್ರಮಾಣ ಶೇ. 5.98 ಇದೆ. ಜೂ.9 ಮತ್ತು 16ರ ದಿನಗಳಂದು ತಲಾ 8 ಮಂದಿ ಮೃತಪಟ್ಟಿರುವುದು ಅತ್ಯಧಿಕವಾಗಿದೆ.
ರಾಷ್ಟ್ರೀಯ ಮರಣ ಪ್ರಮಾಣ ಶೇ. 12 ಇದೆ. ಜಯದೇವ ಆಸ್ಪತ್ರೆಯ ಮರಣ ಪ್ರಮಾಣ ಶೇ.8 ಇದೆ ಎಂದು ವೈದ್ಯರು ತಿಳಿಸಿದ್ದಾರೆ.






