ಮೈಸೂರು | ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ

ವೆಂಕಟೇಶ್
ಮೈಸೂರು: ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ವಸ್ತು ಪ್ರದರ್ಶನದ ಮುಂಭಾಗದಲ್ಲೇ ಮಂಗಳವಾರ ಬೆಳಿಗ್ಗೆ 11.30 ರ ಸಮಯದಲ್ಲಿ ಕ್ಯಾತಮಾರನಹಳ್ಳಿಯ ವೆಂಕಟೇಶ್ ಅಲಿಯಾಸ್ ಗಿಲ್ಕಿ (38) ನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸ್ವೀಫ್ಟ್ ಕಾರ್ನಲ್ಲಿ ತೆರಳುತ್ತಿದ್ದ ವೆಂಕಟೇಶ್ ಮೇಲೆ ಆಟೋದಲ್ಲಿ ಆಗಮಿಸಿದ ಐವರ ತಂಡ ಅಡ್ಡ ಹಾಕಿ ಕಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಕಾರಿನಲ್ಲಿ ಬಂದಿದ್ದ ಐದಾರು ಯುವಕರಿಂದ ಏಕಾಏಕಿ ದಾಳಿ ನಡೆದಿದ್ದು, ಕಾರಿನಿಂದ ಕೆಳಗಿಳಿದು ತಪ್ಪಿಸಿಕೊಳ್ಳಲು ವೆಂಕಟೇಶ್ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ತೀವ್ರ ರಕ್ತಸ್ರಾವದಿಂದ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಹತ್ಯೆಯಾದ ವೆಂಕಟೇಶ್, ಈ ಹಿಂದೆ ಕೊಲೆಯಾಗಿದ್ದ ರೌಡಿ ಶೀಟರ್ ಕ್ಯಾತಮಾರನಹಳ್ಳಿ ಕಾರ್ತಿಕ್ ಸಹಚರನಾಗಿದ್ದ ಎನ್ನಲಾಗಿದೆ. ಕಾರ್ತಿಕ್ ಕೊಲೆಯಾದ ನಂತರ ಆತನ ವ್ಯವಹಾರವನ್ನು ವೆಂಕಟೇಶ್ ನೋಡಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.
ಹಳೇ ವೈಷಮ್ಯದಿಂದ ಈ ಕೊಲೆ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕೊಲೆಯಾದ ಘಟನೆ ಸಂಪೂರ್ಣ ಚಿತ್ರಣ ಸ್ಥಳೀಯ ಅಂಗಡಿಯೊಂದರ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕಾರ್, ಡಿಸಿಪಿಗಳಾದ ಸುಂದರ್ ರಾಜ್ ಮತ್ತು ಬಿಂದುಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.







