ಮೈಸೂರು | ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ

ಸಾಂದರ್ಭಿಕ ಚಿತ್ರ
ಮೈಸೂರು : ತಾಯಿಯೊಬ್ಭಳು ತನ್ನ ಇಬ್ಬರು ಹೆಣ್ಣು ಮಕ್ಕಳ ಕುತ್ತಿಗೆ ಕೊಯ್ದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.
ಬೆಟ್ಟದಪುರ ಗ್ರಾಮದ ರಬಿಯಾ ಭಾನು ಮಕ್ಕಳನ್ನು ಕೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಕಳೆದ 3 ವರ್ಷಗಳ ಹಿಂದೆ ರಬಿಯಾ ಭಾನುಗೆ ಸೈಯದ್ ಮುಸಾವೀರ್ ಎಂಬುವರ ಜೊತೆಗೆ ಮದುವೆಯಾಗಿದೆ. ಇಬ್ಬರ ದಾಂಪತ್ಯ ಜೀವನಕ್ಕೆ 2 ವರ್ಷದ ಒಂದು ಹೆಣ್ಣು ಮಗು ಇದ್ದು, ಕಳೆದ 8 ದಿನಗಳ ಹಿಂದೆ ಮತ್ತೊಂದು ಹೆಣ್ಣು ಮಗು ಕೂಡ ಜನಿಸಿತ್ತು.
ಮೊದಲ ಹೆಣ್ಣು ಮಗು ಅನಮ್ ಫಾತಿಯಾ ವಿಶೇಷ ಚೇತನ ಮಗುವಾಗಿದ್ದ ಕಾರಣ ಕೌಟುಂಬಿಕ ಕಲಹ ಇತ್ತು ಎನ್ನಲಾಗಿದೆ. ಕಳೆದ 8 ದಿನದ ಹಿಂದೆ ಇನ್ನೊಂದು ಮಗು ಕೂಡ ಜನಿಸಿದ್ದು ಅದು ಹೆಣ್ಣು ಮಗುವಾಗಿದೆ. ಹೀಗಾಗಿ ತಾಯಿ ರಬಿಯಾ ಭಾನು ಬೇಜಾರಿನಲ್ಲಿದ್ದು ತಂದೆ ಮನೆಯಲ್ಲಿ ಬಾಣಂತನಕ್ಕೆ ಹೋಗಿದ್ದಾಳೆ. ಇಂದು ಬೆಳಿಗ್ಗೆ ಮಕ್ಕಳ ಕತ್ತು ಕೊಯ್ದು ತಾನು ಕೂಡ ಕೊತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತಿಂಡಿಗೆ ಕರೆಯಲು ಕುಟುಂಬಸ್ಥರು ರೂಮಿನ ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ.
ಬೆಟ್ಟದಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.







