ಮೈಸೂರು | ಮೊಬೈಲ್ ಫೋನ್ ಬಾಯಲ್ಲಿಟ್ಟು ಸ್ಫೋಟಿಸಿ ಪ್ರೇಯಸಿಯ ಹತ್ಯೆ!

ಸಾಂದರ್ಭಿಕ ಚಿತ್ರ | PC : freepik
ಮೈಸೂರು,ಆ.25 : ತನ್ನ ಪ್ರೇಯಸಿಯ ಬಾಯಿಯಲ್ಲಿ ಮೊಬೈಲ್ ಫೋನ್ ಇಟ್ಟು, ವೈರ್ಗಳ ನೆರವಿನಿಂದ ಅದರ ಬ್ಯಾಟರಿಯನ್ನು ಸಿಡಿಸಿ ಹತ್ಯೆ ಮಾಡಿದ್ದಾನೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ಸಿದ್ದರಾಜು ಎಂದು ಗುರುತಿಸಲಾಗಿದ್ದು, ತಾಲ್ಲೂಕಿನ ಭೇರ್ಯ ಗ್ರಾಮದ ಲಾಡ್ಜ್ನಲ್ಲಿ ಪ್ರೇಯಸಿಯನ್ನು ಕೊಲೆ ಮಾಡಿದ್ದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಣಸೂರು ತಾಲ್ಲೂಕಿನ ಗೆರಸನಹಳ್ಳಿಯ ರಕ್ಷಿತಾ (20) ಕೊಲೆಯಾದ ಮಹಿಳೆ.
ಕೇರಳ ಮೂಲದ ವ್ಯಕ್ತಿಯನ್ನು ವಿವಾಹವಾಗಿದ್ದ ಮಹಿಳೆ ಹಾಗೂ ಆರೋಪಿಯ ನಡುವೆ ಸಂಬಂಧವಿತ್ತು ಎನ್ನಲಾಗಿದೆ. ಕಪ್ಪಡಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಇಬ್ಬರೂ ಶನಿವಾರ ಭೇರ್ಯಕ್ಕೆ ಬಂದು ಲಾಡ್ಜ್ನಲ್ಲಿ ತಂಗಿದ್ದರು. ರವಿವಾರ ಬೆಳಿಗ್ಗೆ ಆರೋಪಿಯು ಠಾಣೆಗೆ ತೆರಳಿ, ಪ್ರೇಯಸಿಯು ಮೊಬೈಲ್ ಫೋನ್ ಸಿಡಿದು ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಪರಿಶೀಲನೆ ನಡೆಸಿದಾಗ ಯುವತಿಯು ಹಾಸಿಗೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿದ್ದು, ಬಾಯಿ ಛಿದ್ರವಾಗಿತ್ತು. ಅಲ್ಲಲ್ಲಿ, ಎಲೆಕ್ಟ್ರಿಕ್ ವೈರ್ಗಳು ಸಿಕ್ಕಿವೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಯೇ ಕೊಲೆ ಮಾಡಿರುವುದು ಗೊತ್ತಾಯಿತು ಎಂದು ತಿಳಿಸಿದ್ದಾರೆ.
‘ಮಹಿಳೆಯ ಬಾಯಿಯಲ್ಲಿ ಮೊಬೈಲ್ ಫೋನ್ ಇಟ್ಟು, ವೈರ್ಗಳನ್ನು ಬಳಸಿ ಅದನ್ನು ಸ್ಫೋಟಿಸಿರುವಂತೆ ಕಂಡುಬಂದಿದೆ. ವಿಚಾರಣೆ ನಡೆದಿದೆʼ ಎಂದು ಸಿಪಿಐ ಶಶಿಕುಮಾರ್ ಅವರು ತಿಳಿಸಿದರು.







