ಮೈಸೂರು ಅರಮನೆ ಪ್ರವೇಶಿಸಿದ ದಸರಾ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ

ಮೈಸೂರು : ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಅಭಿಮನ್ಯು ನೇತೃತ್ವದ 9 ಆನೆಗಳನ್ನು ಸುರಿಯುತ್ತಿದ್ದ ತುಂತುರು ಮಳೆಯಲ್ಲಿಯೇ ರವಿವಾರ ಸಂಜೆ ಸಾಂಪ್ರದಾಯಿಕವಾಗಿ ಅರಮನೆ ಅವರಣದಲ್ಲಿ ಸ್ವಾಗತಿಸಲಾಯಿತು.
ಅಶೋಕಪುರಂ ಅರಣ್ಯ ಭವನದಿಂದ ನಗರದ ಮುಖ್ಯರಸ್ತೆಯಲ್ಲಿ ಸಾಗಿ ಬಂದ ಗಜಪಡೆಯನ್ನು ಮೈಸೂರು ಅರಮನೆ ಮಂಡಳಿ ವತಿಯಿಂದ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು.
ಜಯಮಾರ್ತಂಡ ದ್ವಾರದಲ್ಲಿ ಸಂಜೆ 6.40ಕ್ಕೆ ಪೂಜೆ ಆರಂಭಗೊಂಡಿತು. 6.45ಕ್ಕೆ ಮುಕ್ತಾಯಗೊಂಡಿತು. ಅಭಿಮನ್ಯು, ಭೀಮ, ಮಹೇಂದ್ರ, ವರಲಕ್ಷ್ಮಿ, ಧನಂಜಯ, ಪ್ರಶಾಂತ್, ಏಕಲವ್ಯ, ಕಂಜನ್ ಆನೆಗಳಿಗೆ ಕಬ್ಬು-ಬೆಲ್ಲ, ಹಣ್ಣುಗಳನ್ನು ನೀಡಲಾಯಿತು.
ಜನಪ್ರತಿನಿಧಿಗಳು, ಅಧಿಕಾರಿಗಳು ಗಜಪಡೆಗೆ ಪುಷ್ಪಾರ್ಚನೆ ಮಾಡಿದ ಬಳಿಕ ಆನೆಗಳು ಅರಮನೆ ಪ್ರವೇಶಿಸಿದವು. ಇದೇ ವೇಳೆ ನಗರ ಪೊಲೀಸರಿಂದ ಗೌರವ ವಂದನೆ ಸಲ್ಲಿಸಲಾಯಿತು. ಆನೆಗಳ ಸ್ವಾಗತಕ್ಕೆ ಕಲಾತಂಡಗಳು ಮೆರುಗು ತಂದವು. ಸುರಿಯುವ ಮಳೆಯಲ್ಲಿಯೂ ಪೂಜಾ ಕುಣಿತ, ಜಂಬೆ, ನಗಾರಿ, ಮಂಗಳವಾದ್ಯ ತಂಡಗಳ ಕಲಾವಿದರು ಸಂಭ್ರಮವನ್ನು ಹೆಚ್ಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಜಿ.ಟಿ.ದೇವೇಗಡ, ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಜಿಪಂ ಸಿಇಒ ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್‌ಪಿ ಎನ್.ವಿಷ್ಣುವರ್ಧನ್, ಮುಡಾ ಆಯುಕ್ತ ರಕ್ಷಿತ್, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಅಸೀಫ್ ಮುಂತಾದವರಿದ್ದರು.
ಅರಣ್ಯ ಭವನದಲ್ಲಿ ಪೂಜೆ: ಆ. 4ರಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಿಂದ ಆಗಮಿಸಿ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಬೀಡುಬಿಟ್ಟಿದ್ದ ಗಜಪಡೆಗೆ ರವಿವಾರ ಮಧ್ಯಾಹ್ನ 3.30ರ ಸುಮಾರಿಗೆ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಗಜಪಡೆಗೆ ಪೂಜೆ ಸಲ್ಲಿಸುವ ವೇಳೆಗೆ ಮಳೆ ಸುರಿಯಲಾರಂಭಿಸಿತು. ಅಧಿಕಾರಿಗಳು ಛತ್ರಿ ಹಿಡಿದುಕೊಂಡು ಪೂಜೆ ಸಲ್ಲಿಸಿ ಬೀಳ್ಕೊಟ್ಟರು.
ಆಕರ್ಷಿಸಿದ ಮೆರವಣಿಗೆ: ಅರಣ್ಯ ಭವನದಿಂದ ಅರಮನೆ ತನಕ ರಸ್ತೆ ಮಾರ್ಗವಾಗಿ ಸಾಗಿ ಬಂದ ಗಜಪಡೆಯು ಸಾರ್ವಜನಿಕರನ್ನು ಆಕರ್ಷಿಸಿತು. ಬಲ್ಲಾಳ್ ವೃತ್ತ, ರಾಮಸ್ವಾಮಿ ವೃತ್ತದ ಮಾರ್ಗವಾಗಿ ಚಾಮರಾಜ ಜೋಡಿ ರಸ್ತೆಯಲ್ಲಿ ಆನೆಗಳು ಗಾಂಭರ‍್ಯದ ಹೆಜ್ಜೆ ಹಾಕಿದವು. ಮೈಸೂರು-ಊಟಿ ರಸ್ತೆ ಮಾರ್ಗವಾಗಿ ಅರಮನೆ ತಲುಪಿದವು.
ಸರ್ವಾಲಂಕೃತಗೊಂಡಿದ್ದ ದಸರಾ ಆನೆಗಳನ್ನು ಮಾರ್ಗದುದ್ದಕ್ಕೂ ನೂರಾರು ಜನರು ಕಣ್ತುಂಬಿಕೊಂಡರು. ಕೆಲವೆಡೆ ಪೂಜೆ ಸಲ್ಲಿಸಿದರು.
ಈ ಬಾರಿ ಗಾಂಧಿ ಜಯಂತಿ ದಿನವೇ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಹೀಗಾಗಿ ಗಾಂಧಿಜಿಯವರ ಸಂದೇಶ ಸಾರುವಂತಹ ದಸರಾ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಈ ಭಾರಿಯೂ 21 ದಿನಗಳ ಕಾಲ ವಿದ್ಯುತ್ ದೀಪಾಲಂಕಾರ ಇರುತ್ತದೆ. ಮುಂಚಿತವಾಗಿಯೇ ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲು ಸೂಚಿಸಿದ್ದೇವೆ. ದಸರಾ ಉದ್ಘಾಟಕರನ್ನು ಸಿಎಂ ಆಯ್ಕೆ ಮಾಡುತ್ತಾರೆ. ಡ್ರೋನ್ ಶೋ ಟಿಕೆಟ್ 3 ಸಾವಿರ ನಿಗದಿ ಮಾಡಲಾಗಿದೆ. ಈ ಬಾರಿಯೂ ಏರ್ ಶೋ ಇರುತ್ತದೆ ಎಂದರು.







