ಮೈಸೂರು | ಶೋಷಿತರು ಸಂವಿಧಾನ ಅಪ್ಪುವುದು ಪ್ರಭುತ್ವಕ್ಕೆ ಭಯ : ಭನ್ವರ್ ಮೇಘವಂಶಿ

ಮೈಸೂರು, ನ.21: ಶೋಷಿತ ವರ್ಗಗಳ ಜನರು, ಅವಕಾಶ ವಂಚಿತರು ಸಂವಿಧಾನ ಅಪ್ಪು ವುದು ಪ್ರಭುತ್ವಕ್ಕೆ ಭಯ. ಹಾಗಾಗಿಯೇ ಸಂವಿಧಾನವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ರಾಜಸ್ಥಾನದ ಸಾಮಾಜಿಕ ಕಾರ್ಯಕರ್ತ ಭನ್ವರ್ ಮೇಘವಂಶಿ ಅಭಿಪ್ರಾಯಪಟ್ಟಿದ್ದಾರೆ.
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಗಾಂಧಿ ವಿಚಾರ ಪರಿಷತ್ತು ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, ಸಂಶೋಧಕರು ಶುಕ್ರವಾರ ಆಯೋಜಿಸಿದ್ದ ಹಿರಿಯ ಸಮಾಜವಾದಿ ಪ.ಮಲ್ಲೇಶ್ ನೆನಪಿನ ಕಾರ್ಯಕ್ರಮದಲ್ಲಿ ಸಮಕಾಲಿನ ಸಂಘರ್ಷ ಸವಾಲು ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದ ಮೂಲಕ ಶೋಷಿತ ಸಮುದಾಯದಲ್ಲಿ ಬದಲಾವಣೆಯಾಗುತ್ತಿರುವುದನ್ನು ಮನುವಾದಿಗಳು ಸಹಿಸುತ್ತಿಲ್ಲ. ಹೀಗಾಗಿ ಪ್ರತ್ಯೇಕ ವ್ಯವಸ್ಥೆ ಅಥವಾ ಸಂವಿಧಾನ ಬದಲಾವಣೆಗೆ ಪ್ರಯತ್ನಗಳಾಗುತ್ತಿವೆ. ಪ್ರಭುತ್ವವು ಸಂವಿಧಾನ ಬದಲಾವಣೆಯ ದೃಷ್ಟಿಯಿಂದ ಕೆಲಸ ಮಾಡುತ್ತಿದೆ ಎಂದು ಭನ್ವರ್ ಹೇಳಿದರು.
ಸಂವಿಧಾನವು ಆದಿವಾಸಿ, ದಲಿತ, ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೆ ಸಮಾನ ಅವಕಾಶ ನೀಡುತ್ತದೆ. ಆದರೆ ಜಾತ್ಯತೀತ, ಸಮಾಜವಾದಿ ಭಾರತವನ್ನು ಆಶಿಸದಿರುವ ಬಾಬಾಗಳು ಹಿಂದೂ ರಾಷ್ಟ್ರ ನಿರ್ಮಿಸಲು ಪಣತೊಟ್ಟಿದ್ದಾರೆ. ಅವರು ಕೆಲವರ್ಗದ ಜನ ಗುಲಾಮರಾಗಿಯೇ ಉಳಿಯಬೇಕೆಂಬ ಆಶಯ ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ಕುಂಭಮೇಳದಲ್ಲಿ ದೇಶಿ ಸಂವಿಧಾನ ಪರಿಚಯಿಸಿದ್ದು, ಅವು ಹಿಂದಿನ ವರ್ಣ ಹಾಗೂ ಶ್ರೇಣೀಕೃತ ವ್ಯವಸ್ಥೆಯನ್ನು ಹೊಂದಿವೆ ಎಂದು ಅವರು ನುಡಿದರು.
ಸಾಮಾನ್ಯರಿಗಾಗಿ ಹೋರಾಡುವ ಕ್ರಾಂತಿಕಾರಿಗಳನ್ನು ಜೈಲಿಗಟ್ಟಿ, ಬಲತ್ಕಾರ ಮಾಡುವವರಿಗೆ ಜಾಮೀನು ನೀಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ನ ಆದೇಶವನ್ನೂ ಲೆಕ್ಕಿಸದೆ ಬುಲ್ಡೋಝರ್ ಕಾನೂನು ತರಲಾಗಿದೆ. ಡಿಜಿಟಲ್ ವ್ಯವಸ್ಥೆಯ ಮೇಲೆ ಸರಕಾರದ ನಿರ್ಬಂಧ ಹೆಚ್ಚುತ್ತಿದ್ದು, ರಾಷ್ಟ್ರೀಯ ಸುರಕ್ಷತೆ ನೆಪದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗುತ್ತಿದೆ. ಸಾಮಾಜಿಕ ಮಾಧ್ಯಮವನ್ನು ಪ್ರಗತಿಪರರ ಚಿಂತನೆಗಳನ್ನು ಟೀಕಿಸಲು, ಬೆದರಿಕೆ ಹಾಕಲು ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾದರ್ನ್, ಚಿಂತಕಿ ಸವಿತಾ ಪ.ಮಲ್ಲೇಶ್, ಮಹಿಳಾ ಹೋರಾಟಗಾರ್ತಿ ಸುಶೀಲ, ಹೋರಾಟಗಾರ ಎಂ.ಕೆ.ಸಾಹೇಬ್ ಭಾಗವಹಿಸಿದ್ದರು.
ಜಾಗತಿಕ ಬಂಡವಾಳ ಶಾಹಿ ಜಗತ್ತಿನ ತುಂಬ ಕುರುಡು ಕಾಂಚಾಣ ಮೂಲಕ ಆಳುವ ಪ್ರಭುಗಳನ್ನು ನಿಯಂತ್ರಿಸುತ್ತಿದೆ. ಬಂಡವಾಳ ಶಾಹಿ ವಿರುದ್ಧ ಮಾತನಾಡಬೇಕಾದವರು ಮಾತನಾಡಲಿಲ್ಲ. ಅದು ಈಗ ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ತನ್ನ ಅಸ್ಥಿತ್ವವನ್ನು ಗಟ್ಟಿಗೊಳಿಸಿಕೊಳ್ಳುತ್ತಿದೆ.
-ಡಾ.ಮೀನಾಕ್ಷಿ ಬಾಳಿ, ಪ್ರಗತಿಪರ ಚಿಂತಕಿ.
ಸಂದಿಗ್ಧ ಸ್ಥಿತಿಯಲ್ಲಿ ಗಾಂಧಿ, ಅಂಬೇಡ್ಕರ್, ಕಮ್ಯುನಿಸ್ಟ್ ಎಂಬ ಸಣ್ಣ ಭೇದಗಳನ್ನು ಮರೆತು ವಿಚಾರವಾದಿಗಳು ಒಂದೇ ವೇದಿಕೆಯಲ್ಲಿ ಸೇರಿ ಭಾರತ ದೇಶವನ್ನು ರಕ್ಷಿಸುವ ಅವಶ್ಯಕತೆಯಿದೆ.
-ಭನ್ವರ್ ಮೇಘವಂಶಿ, ಸಾಮಾಜಿಕ ಕಾರ್ಯಕರ್ತ.
ಕೋಮುವಾದಿಗಳನ್ನು ರಕ್ಷಿಸುತ್ತಿರುವ ಸರಕಾರ: ನವೀನ್ ಸೂರಿಂಜೆ
ಮೈಸೂರು : ಪ್ರಚೋದನಕಾರಿ ಭಾಷಣ ಮಾಡುವ ಕೋಮುವಾದಿಗಳನ್ನು ರಾಜ್ಯ ಸರ್ಕಾರವೇ ರಕ್ಷಿಸುತ್ತಿದೆ ಎಂದು ಪತ್ರಕರ್ತ ನವೀನ್ ಸೂರಿಂಜೆ ಆರೋಪಿಸಿದರು.
ಗೋಷ್ಠಿ 1ರಲ್ಲಿ ಸಮ ಸಮಾಜಕ್ಕಿರುವ ಅಡೆತಡೆಗಳು ವಿಚಾರ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮನುವಾದದ ವಿರುದ್ಧವಾಗಿ ಚೆನ್ನಾಗಿ ಮಾತಾಡುತ್ತಾರೆ. ಅವರ ಸರಕಾರದ ಕಾರ್ಯವೈಖರಿ ವ್ಯತಿರಿಕ್ತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಎಸ್‌ಐಆರ್ ಸಂವಿಧಾನ ಪ್ರಜಾಪ್ರಭುತ್ವವನ್ನು ಸೋಲಿಸಲಿದೆ’ :
ಮೈಸೂರು, ನ.21:ದೇಶದಲ್ಲಿ ಚುನಾವಣಾ ಆಯೋಗ ಜಾರಿಗೆ ತಂದಿರುವ ಎಸ್‌ಐಆರ್ ವಿರೋಧ ಪಕ್ಷಗಳನ್ನು ಸೋಲಿಸುವುದಕ್ಕಿಂತ ಸಂವಿಧಾನ, ಪ್ರಜಾಪ್ರಭುತ್ವವನ್ನು ಸೋಲಿಸಲಿದೆ ಎಂದು ಚಿಂತಕ ಶಿವಸುಂದರ್ ಅಭಿಪ್ರಾಯಿಸಿದ್ದಾರೆ.
ಗೋಷ್ಠಿ 3 ರ ಚುನಾವಣೆಯಿಂದ ಬದಲಾವಣೆ ಕುರಿತು ವಿಷಯ ಮಂಡನೆ ಮಾಡಿ ಮಾತನಾಡಿದ ಅವರು, ಚುನಾವಣಾ ಆಯೋಗ ಜಾರಿಗೆ ತಂದಿರುವ ಎಸ್‌ಐಆರ್ ವಿರುದ್ಧ ದೇಶಾದ್ಯಂತ ದೊಡ್ಡ ಹೋರಾಟ ನಡೆಯಬೇಕಿದೆ. ಅಸಹಕಾರ ಚಳವಳಿ ಮೂಲಕ ಇದನ್ನು ಹಿಮ್ಮಟ್ಟಿಸಬೇಕಿದೆ ಎಂದು ಹೇಳಿದರು. ಬಿಹಾರದಲ್ಲಿ ಈಗಾಗಲೇ ಅವರು ಯಶಸ್ವಿಯಾಗಿದ್ದಾರೆ. 12 ರಾಜ್ಯದಲ್ಲಿ ಈ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅಲ್ಲಿನ ವಿರೋಧ ಪಕ್ಷಗಳು ಇದನ್ನು ವಿರೋಧಿಸಿ ದೊಡ್ಡಮಟ್ಟದಲ್ಲಿ ಹೋರಾಟ ರೂಪಿಸಬೇಕಿದೆ. ಅವುಗಳು ಮಾಡದಿದ್ದರೂ ನಾವುಗಳು ಮಾಡಬೇಕಿದೆ ಎಂದು ಹೇಳಿದರು.







