ಮೈಸೂರು | ನಾಲೆಗೆ ಈಜಲು ತೆರಳಿದ್ದ ಮೂವರು ಬಾಲಕರು ಮೃತ್ಯು

ಮೈಸೂರು : ಮೈಸೂರು ಜಿಲ್ಲೆಯ ಸಾಲಿಗ್ರಾಮದ ಚಾಮರಾಜ ಎಡದಂಡೆ ನಾಲೆಯಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಅಯಾನ್ (16), ಆಜಾನ್ (13) ಮತ್ತು ಲುಕ್ಮಾನ್ (14) ಎಂದು ಗುರುತಿಸಲಾಗಿದೆ.
ಸಾಲಿಗ್ರಾಮದ ನಾಲೆಯಲ್ಲಿ ಸೋಮವಾರ ಮೂವರು ಬಾಲಕರು ಈಜಲು ತೆರಳಿದ್ದು, ಈ ವೇಳೆ ನೀರಿನಲ್ಲಿ ಮುಳುಗಿ ಮೂವರು ಬಾಲಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಯಾನ್ ಮತ್ತು ಆಜಾನ್ ಕೆ.ಆರ್.ಪೇಟೆಯ ಖಾಸಗಿ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ದೀಪಾವಳಿ ಹಬ್ಬದ ರಜೆ ಹಿನ್ನಲೆಯಲ್ಲಿ ಊರಿಗೆ ಬಂದಿದ್ದರು ಎನ್ನಲಾಗಿದೆ. ಇಂದು ಸಂಜೆ 4 ಗಂಟೆ ವೇಳೆಗೆ ಈಜಲು ತೆರಳಿದ್ದರು. ಸಂಜೆಯಾದರು ಮಕ್ಕಳು ಮನೆಗೆ ಬಾರದಿರುವುದರಿಂದ ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ಕಾಲುವೆ ಬಳಿ ಮಕ್ಕಳ ಬಟ್ಟೆ ಚಪ್ಪಲಿ ಇರುವುದನ್ನು ಕಂಡು ಹುಡುಕಾಟ ನಡೆಸಿದಾಗ ಮೂವರು ಮಕ್ಕಳು ಮೃತಪಟ್ಟಿರುವುದು ತಿಳಿದು ಬಂದಿದೆ.
ಸದ್ಯ ಇಬ್ಬರು ಬಾಲಕರ ಮೃತದೇಹ ಪತ್ತೆಯಾಗಿದ್ದು, ಇನ್ನು ಒರ್ವನ ಮೃತ ದೇಹ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಸಾಲಿಗ್ರಾಮ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ತಜ್ಞ ಈಜುಗಾರರು, ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.





