Mysuru | ಚಾಮುಂಡಿ ಬೆಟ್ಟದ ಮಹಿಷಾಸುರ ವೃತ್ತದ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

ಮೈಸೂರು : ಮಹಿಷಾ ದಸರಾ ಆಚರಣೆ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರ ವೃತ್ತದ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.
2026ರ ಅ.9ರ ಮಧ್ಯರಾತ್ರಿ 12 ಗಂಟೆಯಿಂದ ಅ.11ರ ಬೆಳಿಗ್ಗೆ 6 ಗಂಟೆಯವರೆಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) 2023ರ ಕಲಂ 163ರ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
ಮಹಿಷಾ ದಸರಾ ಆಚರಣೆ ವಿಚಾರದಲ್ಲಿ ವಿವಿಧ ಸಂಘಟನೆಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ದೇಶ-ವಿದೇಶ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ವಾಸಿಸುವವರಿಗೆ ಈ ಆದೇಶ ಅನ್ವಯಿಸುವುದಿಲ್ಲ. ಉಳಿದಂತೆ ಮಹಿಷಾಸುರನ ಪ್ರತಿಮೆಯ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
ಯಾವುದೇ ಸಂಘಟನೆ ಅಥವಾ ಸಾರ್ವಜನಿಕರು ಆದೇಶವನ್ನು ಉಲ್ಲಂಘಿಸಿ ಸಭೆ, ಸಮಾರಂಭ, ಮೆರವಣಿಗೆ, ಪ್ರತಿಭಟನೆ ಅಥವಾ ರ‍್ಯಾಲಿ ನಡೆಸಲು ಪ್ರಯತ್ನಿಸಿದರೆ, ಅಲ್ಲಿ ಸೇರಿರುವ ಜನರ ಗುಂಪನ್ನು ಅಕ್ರಮ ಕೂಟವೆಂದು ಪರಿಗಣಿಸಲಾಗುವುದು. ಆದೇಶ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಸಿದ್ದಾರೆ.






