Mysuru | ತೆಂಗಿನಕಾಯಿ ಕೀಳುವಾಗ ಆಯತಪ್ಪಿ ಬಿದ್ದು ಕೂಲಿ ಕಾರ್ಮಿಕ ಮೃತ್ಯು

ಮೈಸೂರು : ತೆಂಗಿನ ಮರದಲ್ಲಿ ಕಾಯಿ ಕೇಳುವಾಗ ಆಯತಪ್ಪಿ ಮರದಿಂದ ಕೆಳಕ್ಕೆ ಬಿದ್ದು ಕೂಲಿ ಕಾರ್ಮಿಕರೊಬ್ಬರು ಸಾವಿಗೀಡಾಗಿರುವ ಘಟನೆ ನಂಜನಗೂಡು ತಾಲ್ಲೂಕು ಹುಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹುಣಸನಾಳು ಗ್ರಾಮದ ಲಿಂಗರಾಜು(38) ಮೃತರು.
ಮಂಗಳವಾರ ಬೆಳಿಗ್ಗೆ ಹುಲ್ಲಹಳ್ಳಿ ರೈತರೊಬ್ಬರಿಗೆ ಸೇರಿದ ತೆಂಗಿನ ತೋಟಕ್ಕೆ ತಾಲೂಕಿನ ಹುಣಸನಾಳು ಗ್ರಾಮದ 5 ಮಂದಿ ಕಾಯಿ ಕೀಳಲು ಆಗಮಿಸಿದ್ದರು. ಹುಲ್ಲಹಳ್ಳಿ ಗ್ರಾಮದ ವ್ಯಕ್ತಿ ಒಬ್ಬರು ತೆಂಗಿನ ಕಾಯಿ ಕೀಳುವ ಗುತ್ತಿಗೆಯನ್ನು ಪಡೆದಿದ್ದರು ಎನ್ನಲಾಗಿದೆ.
ಹುಣಸನಾಳು ಗ್ರಾಮದ ಕೂಲಿ ಕಾರ್ಮಿಕ ಲಿಂಗರಾಜು ಕಾಯಿ ಕೀಳುವ ವೇಳೆ ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ದರ್ಶನ್ ಭೇಟಿ, ಸಾಂತ್ವಾನ:
ಕೂಲಿ ಕಾರ್ಮಿಕನ ಸಾವಿನ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ್ ಮತ್ತು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಭೇಟಿ ನೀಡಿ ವೈಯುಕ್ತಿಕವಾಗಿ ಪರಿಹಾರ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.







