Mysuru | ಇಟ್ಟಿಗೆಗೂಡು ಕುಸಿದು ಮೂವರು ಕಾರ್ಮಿಕರು ಮೃತ್ಯು

ಸಾಂದರ್ಭಿಕ ಚಿತ್ರ | PC : Gemini AI
ಮೈಸೂರು/ಟಿ.ನರಸೀಪುರ : ಇಟ್ಟಿಗೆಗೂಡು ಕುಸಿದು ಬಿಸಿ ಇಟ್ಟಿಗೆ ಮತ್ತು ಉರಿಯುತ್ತಿದ್ದ ಬೆಂಕಿಯ ಬೂದಿಯ ಅಡಿಯಲ್ಲಿ ಸಿಲುಕಿ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಬೂದನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿರುವುದು ವರದಿಯಾಗಿದೆ.
ಬೂದಹಳ್ಳಿ ಗ್ರಾಮದ ರಾಜೇಶ್ (32), ನಾರಾಯಣ(53), ಮತ್ತು ನಾಗರಾಜ್ (62) ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಗ್ರಾಮದ ಸಿದ್ಧರಾಜು ಎಂಬವರು ಖಾಸಗಿ ಜಮೀನೊಂದರಲ್ಲಿ ಇಟ್ಟಿಗೆಗೂಡು ಹಾಕಿದ್ದು, ರಾಜೇಶ್, ನಾರಾಯಣ ಮತ್ತು ನಾಗರಾಜು ಅವರು ಶನಿವಾರ ಬೆಳಿಗ್ಗೆ 6 ಗಂಟೆಗೆ ಕೆಲಸಕ್ಕೆ ತೆರಳಿದ್ದರು. ಇಟ್ಟಿಗೆ ಬೇಯಿಸಲು ಹಾಕಿದ್ದ ಬೆಂಕಿ ಹಾಗೂ ಕಾವು ಸಂಪೂರ್ಣ ಆರುವ ಮೊದಲೆ ಯಾವುದೇ ಸರಕ್ಷಿತ ಕ್ರಮಗಳನ್ನು ವಹಿಸದೆ ಗೂಡು ತೆರೆಯುವ ಕೆಲಸದಲ್ಲಿ ತೊಡಗಿಸಿದ್ದಾರೆ ಎನ್ನಲಾಗಿದೆ. ಬೆಳಿಗ್ಗೆ ಸುಮಾರು 11.30 ಗಂಟೆ ವೇಳೆಗೆ ಇಟ್ಟಿಗೆ ಗೂಡು ಏಕಾ ಏಕಿ ಕುಸಿದಿದೆ. ಈ ವೇಳೆ ಸುಡುತ್ತಿದ್ದ ಇಟ್ಟಿಗೆಗಳು ಹಾಗು ಬೆಂಕಿಯ ಬೂದಿ ಕಾರ್ಮಿಕರ ಮೇಲೆ ಬಿದ್ದಿದ್ದು, ತೀವ್ರ ಸುಟ್ಟಗಾಯಗಳಿಂದ ರಾಜೇಶ್ ಮತ್ತು ನಾರಾಯಣ ಸ್ಥಳದಲ್ಲೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಾಗರಾಜು ಅವರನ್ನು ತಕ್ಷಣವೆ ಟಿ.ನರಸೀಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಧ್ಯಾಹ್ನ 3.30 ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ನಾಗರಾಜು ಕೂಡ ಕೊನೆಯುಸಿರೆಳೆದಿದ್ದಾರೆ.
ಪೊಲೀಸರಿಗೆ ದೂರು: ಗೂಡು ನಡೆಸುತ್ತಿದ್ದ ಸಿದ್ಧರಾಜು ಅವರ ನಿರ್ಲಕ್ಷ್ಯ ಮತ್ತು ಮುಂಜಾಗ್ರತಾ ಕ್ರಮಕೈಗೊಳ್ಳದಿರುವುದೇ ಈ ದುರಂತಕ್ಕೆ ಕಾರಣವೆಂದು ಮೃತ ರಾಜೇಶ್ ಅವರ ಸಹೋದರ ಕುಮಾರ್ ಎಂ. ಅವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.






