ಮೈಸೂರಲ್ಲಿ ದಂಪತಿ, ಮಕ್ಕಳ ಅಪಹರಣ; 50 ಸಾವಿರ ನಗದು, ಚಿನ್ನಾಭರಣ ಪಡೆದು ಬಿಡುಗಡೆ

ಸಾಂದರ್ಭಿಕ ಚಿತ್ರ | PC : AI
ಮೈಸೂರು : ಮಹಿಳೆಯೊಬ್ಬರು ತನ್ನ ಮೂವರು ಸಹಚರರೊಂದಿಗೆ ಸೇರಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ತನಗೆ ಪರಿಚಯದ ಕುಟುಂಬದ ದಂಪತಿ ಮತ್ತು ಮಕ್ಕಳನ್ನು ಅಪಹರಿಸಿ, ಅಕ್ರಮ ಬಂಧನದಲ್ಲಿಟ್ಟುಕೊಂಡು ಹಣ ಮತ್ತು ಚಿನ್ನವನ್ನು ವಸೂಲಿ ಮಾಡಿರುವ ಪ್ರಕರಣ ಮೈಸೂರಿನ ರಾಮಕೃಷ್ಣನಗರದಲ್ಲಿ ನಡೆದಿರುವುದು ವರದಿಯಾಗಿದೆ.
ಮೈಸೂರಿನ ರಾಮಕೃಷ್ಣನಗರದ ಇ ಆ್ಯಂಡ್ ಎಫ್ ಬ್ಲಾಕ್ ನಿವಾಸಿಗಳಾದ ಸುನೀತಾ ಹಾಗೂ ಗಣೇಶ್ ದಂಪತಿ ಮತ್ತವರ ಮಕ್ಕಳು ಅಪಹರಣಕ್ಕೊಳಗಾಗಿ ನಂತರ ಬಿಡುಗಡೆಗೊಂಡಿದ್ದಾರೆ.
ಮೈಸೂರಿನ ಕುವೆಂಪುನಗರದ ನಿವಾಸಿ ರಮ್ಯಾ ತನ್ನ ಸಹಚರರೊಂದಿಗೆ ಸೇರಿ ಜು.30ರಂದು ದಂಪತಿ ಹಾಗೂ ಇಬ್ಬರು ಮಕ್ಕಳನ್ನು ಅಪಹರಿಸಿ ಅಕ್ರಮ ಬಂಧನದಲ್ಲಿಟ್ಟುಕೊಂಡು ಹಣ ಮತ್ತು ಚಿನ್ನವನ್ನು ವಸೂಲಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಮ್ಯಾ, ರಾಮು, ಮಂಜುಳಾ ಸಹಿತ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಘಟನೆ ನಂತರ ದಂಪತಿ ಮಕ್ಕಳನ್ನು ಆ.14ರಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಳಿ ಕರೆದುಕೊಂಡು ಹೋಗಿ ಸಮಾಲೋಚನೆ ನಡೆಸಿ, ಮಕ್ಕಳು ಮತ್ತು ತಮಗಾದ ಕೆಟ್ಟ ಅನುಭವವನ್ನು ತಿಳಿಸಿದ್ದಾರೆ. ಮಕ್ಕಳ ಸಮಾಲೋಚನೆ ನಂತರ ರಕ್ಷಣಾಧಿಕಾರಿಯವರು ಕುವೆಂಪುನಗರ ಪೊಲೀಸ್ ಠಾಣಾಧಿಕಾರಿಗೆ ಪತ್ರ ಬರೆದಿದ್ದು, ಮಕ್ಕಳನ್ನು ಅಪಹರಿಸಿ, ಬೆದರಿಸಿರುವ ರಮ್ಯಾ, ರಾಮು, ಮಂಜುಳಾ ಸೇರಿದಂತೆ ನಾಲ್ವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಪತ್ರದ ಆಧಾರದ ಮೇಲೆ ಆ.17ರಂದು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ರಮ್ಯ, ರಾಮು, ಮಂಜುಳಾ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಆರೋಪಿ ರಮ್ಯಾ, ಸುನೀತಾ ಹಾಗೂ ಗಣೇಶ್ ಕುಟುಂಬಕ್ಕೆ ಹಿಂದಿನಿಂದಲೂ ಪರಿಚಿತರಾಗಿದ್ದು, ಅವರೊಂದಿಗೆ ಹಣಕಾಸಿನ ವ್ಯವಹಾರ ಹೊಂದಿದ್ದರು. ಹಲವು ಕಾನೂನು ಪ್ರಕರಣಗಳು ಹಾಗೂ ಚೆಕ್ ಬೌನ್ಸ್ ಗೆ ಸಂಬಂಧಿಸಿದ ವಾರಂಟ್ಗಳನ್ನು ಎದುರಿಸುತ್ತಿದ್ದ ರಮ್ಯಾ ಈ ಹಿಂದೆ ಸುಮಾರು ಒಂದು ತಿಂಗಳ ಕಾಲ ಸುನಿತಾ ಅವರ ಮನೆಯಲ್ಲಿ ವಾಸವಾಗಿದ್ದಳು ಎನ್ನಲಾಗಿದೆ. ಈ ಸಂದರ್ಭದಲ್ಲಿ ಕುಟುಂಬದ ದಿನನಿತ್ಯದ ಚಟುವಟಿಕೆಗಳು, ಹಣ ಹಾಗೂ ಬೆಲೆ ಬಾಳುವ ವಸ್ತುಗಳ ಬಗ್ಗೆ ರಮ್ಯಾಗೆ ಮಾಹಿತಿ ದೊರೆಕಿತ್ತು.
ಜು.30ರಂದು ರಮ್ಯಾ ಗಣೇಶ್ಗೆ ಕರೆ ಮಾಡಿ ಮನೆಗೆ ಬನ್ನಿ ಹಣದ ವ್ಯವಹಾರದ ಬಗ್ಗೆ ಚರ್ಚಿಸಬೇಕಿದೆ ಎಂದು ಕರೆದಿದ್ದಾರೆ. ಆಕೆಯ ಒತ್ತಡದಿಂದ ಗಣೇಶ್ ಕುವೆಂಪುನಗರದ ಕೆಹೆಚ್ಬಿ ಕಾಲೋನಿಯಲ್ಲಿರುವ ರಮ್ಯಾ ಮನೆಗೆ ತೆರೆಳಿದ್ದಾರೆ. ಗಣೇಶ್ ಬರುವಷ್ಟರಲ್ಲಿ ಅವರ ಪತ್ನಿಗೂ ಕರೆ ಮಾಡಿ ಅವರನ್ನು ಮನೆಗೆ ಕರೆಸಿಕೊಂಡಿದ್ದಾರೆ. ಅಲ್ಲಿಗೆ ತೆರಳಿದ ಬಳಿಕ ದಂಪತಿಯನ್ನು ಪ್ರತ್ಯೇಕ ಕೊಠಡಿಗಳಲ್ಲಿ ಇರಿಸಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಕ್ಕಳ ಅಪಹರಣ: ಅದೇ ದಿನ ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಸುನಿತಾ ಅವರ ಐದು ವರ್ಷದ ಪುತ್ರಿಹಾಗೂ 13 ವರ್ಷದ ಪುತ್ರನನ್ನು ಅವರು ಓದುತ್ತಿದ್ದ ಶಾಲೆಗಳಿಂದ ಆರೋಪಿಗಳು ಕರೆದುಕೊಂಡು ಹೋಗಿ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದ್ದು, ಈ ಘಟನೆ ಶಾಲೆಗಳಲ್ಲಿನ ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾಗಿದೆ.
20 ಲಕ್ಷ ರೂ.ಗೆ ಬೇಡಿಕೆ: ಮಕ್ಕಳು ಹಾಗೂ ತಮ್ಮನ್ನು ಬಿಡುಗಡೆ ಮಾಡಬೇಕಾದರೆ 20 ಲಕ್ಷ ರೂ. ಹಣ ನೀಡ ಬೇಕು, ಇಲ್ಲವಾದರೆ ತಮ್ಮನ್ನು ವಿವಸ್ತ್ರಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿಸುವುದಾಗಿ ಅಥವಾ ಕೊಲೆ ಮಾಡುವು ದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಆರೋಪಿಗಳ ಬೆದರಿಕೆಗೆ ಹೆದರಿದ ಸುನಿತಾ ಅವರು 50,000 ರೂ. ನಗದು ಹಾಗೂ ಗಣೇಶ್ ಅವರ 51 ಗ್ರಾಂ ತೂಕದ ಚಿನ್ನದ ಬ್ರೇಸ್ಲೆಟ್ ನೀಡಿದ್ದಾರೆ. ಬಳಿಕ ಅದೇ ದಿನ ಸಂಜೆ ಸುಮಾರು 4.30ಕ್ಕೆ ಮಕ್ಕಳನ್ನು ಹಾಗೂ ದಂಪತಿಯನ್ನು ಬಿಡುಗಡೆ ಮಾಡಿ ತಲೆಮರೆಸಿಕೊಂಡಿದ್ದಾರೆ.






