Mysuru | ವಿರೋಧದ ನಡುವೆಯೂ ʼಕಂಬಳʼಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ವಿದ್ಯುಕ್ತ ಚಾಲನೆ

ಮೈಸೂರು : ವಿರೋಧದ ನಡುವೆಯೂ ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಆಯೋಜಿಸಿರುವ ರೋಮಾಂಚಕ ಕರಾವಳಿ ಭಾಗದ ಪ್ರಮುಖ ಕ್ರೀಡೆ ಕಂಬಳಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿದ್ಯುಕ್ತವಾಗಿ ಚಾಲನೆ ನೀಡಿದರು.
ನಗರದ ಸಾತಗಳ್ಳಿ ರಿಂಗ್ ರಸ್ತೆಯಲ್ಲಿರುವ ವಿಶಾಲ ಮೈದಾನದಲ್ಲಿ ಆಯೋಜಿಸಿರುವ ಕಂಬಳಕ್ಕೆ ರವಿವಾರ ಕಿಕ್ಕಿರಿದು ತುಂಬಿದ್ದ ಜಮಸ್ತೋಮದ ನಡುವೆ ಕೋಣಗಳ ಓಟ ಕಂಡು ಅಚ್ಚರಿ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮೈಸೂರು ದಸರಾಗೆ ಕೇವಲ ಕಂಬಳವನ್ನು ತಂದಿಲ್ಲ, ಕರಾವಳಿ ಸಂಸ್ಕೃತಿಯನ್ನು ಇಡೀ ಕರ್ನಾಟಕಕ್ಕೆ ತಂದಿದ್ದೇವೆ. ಈ ಮೂಲಕ ಕರವಾಳಿ ಜನರ ಹೃದಯವನ್ನು ಗೆದ್ದಿದ್ದೇವೆ ಎಂದು ಹೇಳಿದರು.
ಕಂಬಳ ಆರಂಭಕ್ಕೂ ಮುನ್ನ ಟೀಕೆಗಳು ಬಂದವು. ಟೀಕೆಗಳು ಸಾಯುತ್ತವೆ ನಂಬಿಕೆಗಳು ಉಳಿಯುತ್ತವೆ. ನಾಡಿನ ಎಲ್ಲಾ ಸಂಸ್ಕೃತಿ ಪರಂಪರೆಯನ್ನು ಜನರು ನೋಡಿ ಮೆಚ್ವುಗೆ ವ್ಯಕ್ತಪಡಿಸಬೇಕು ಎಂದು ಹೇಳಿದರು.
ಕಂಬಳ ನಾಡಿನ ಹಬ್ಬ, ಪ್ರಕೃತಿ ಸಾಂಸ್ಕೃತಿಕ ಇತಿಹಾಸವಿದೆ. ಕಂಬಳದಲ್ಲಿ ಭಾಗವಹಿಸುವ ಪ್ರತಿ ಕೋಣಗಳಿಗೂ ತಲಾ 5 ಲಕ್ಷ ನೀಡುತ್ತೇವೆ ಎಂದು ಹೇಳಿದರು.
ರವಿವಾರದಿಂದ ಆಭವಾದ ಕಂಬಳ ನಿರಂತರವಾಗಿ ಸೋಮವಾರ ಸಂಜೆವರೆಗೂ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ, ಎನ್.ಚಲುವರಾಯಸ್ವಾಮಿ, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಕೆ.ಹರೀಶ್ ಗೌಡ. ಡಾ.ಬಿ.ಅರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ನರೇಂದ್ರ, ಕಂಬಳ ಸಮಿತಿಯ ಅಶೋಕ್ ಕುಮಾರ್ ರೈ, ದೇವಿಪ್ರಸಾದ್ ಶೆಟ್ಟಿ, ಚಂದ್ರಹಾಸ್, ಬೋವಿ ಅಭಿವೃದ್ಧಿ ನಿಗಮದ ಅಧಗಯಕ್ಷ ರಾಮಪ್ಪ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಮಾಜಿ ಶಾಸಕ ನರೆಂದ್ರ ಬಾಬು, ಪ್ರಾಯೋಜಕರಾದ ರಾಘವನ್ ಮತ್ತು ರವಿರಾಜ್ ಉಪಸ್ಥಿತರಿದ್ದರು.
ಶಾಸಕ ಕೆ.ಹರೀಶ್ ಗೌಡರನ್ನು ತಡೆದ ಪೊಲೀಸರು
ಮೈಸೂರು: ವೇದಿಕೆ ಕಾರ್ಯಕ್ರಮ ಮುಗಿಸಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಕಂಬಳ ಓಟದ ಜಾಗಕ್ಕೆ ತೆರಳುವ ವೇಳೆ ಶಾಸಕ ಕೆ.ಹರೀಶ್ ಗೌಡರನ್ನು ಪೊಲೀಸರು ತಡೆದರು.
ಇದರಿಂದ ಸಿಟ್ಟಾದ ಶಾಸಕರು ಕೆಲ ಸಮಯ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಈ ವೇಳೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ಮತ್ತು ಎಸಿಪಿ ಶ್ರೀಕಾಂತ್ ಅವರು ಶಾಸಕರನ್ನು ಕೈ ಹಿಡಿದು ಒಳಕ್ಕೆ ಕರೆದೊಯ್ದರು.
ಮೈಸೂರು ದಸರಾ ಸಂಭ್ರಮದ ರೀಲ್ಸ್ ಹಂಚಿಕೊಂಡರೆ ಪ್ರಶಸ್ತಿ:
ಮೈಸೂರು: ದಸರಾ ಸಂಭ್ರವನ್ನು ರೀಲ್ಸ್ ಹಂಚುಕೊಳ್ಳಿ. ಉತ್ತಮ ನೂರು ಜನರಿಗೆ ಪ್ರಶಸ್ತಿ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಿದರು.
ದಸರಾ ಆಚರಣೆಯನ್ನು ಯಾರು ಬೇಕಾದರು ರೀಲ್ಸ್ ಮಾಡಬಹುದು. ದಸರಾ ಆಹಾರ ಮೇಳ, ಫಲಪುಷ್ಪಪ್ರದರ್ಶನ, ಯವದಸರಾ ಯಾವುದೇ ದಸರಾ ಸಂಬಂಧಿತ ಕಾರ್ಯಕ್ರಮಗಳನ್ನು ರೀಲ್ಸ್ ಮಾಡಿ ನನ್ನ ಇನ್ಟ್ರಾಗ್ರಾಂ ಖಾತೆ, ಜಿಲ್ಲಾಧಿಕಾರಿಗಳ ಖಾತೆಗೆ ಕಳುಹಿಸಿದರೆ ಪ್ರಶಸ್ತಿ ನೀಡುತ್ತೇವೆ ಎಂದು ಹೇಳಿದರು.






