Mysuru | ನಂಜನಗೂಡು ತಾಲ್ಲೂಕಿನ ಬಾಳೆ ತೋಟದಲ್ಲಿ ಡ್ರಗ್ಸ್ ಜಾಲ ಪತ್ತೆ ಹಚ್ಚಿದ ಕೇರಳಂ ಪೊಲೀಸರು; ಓರ್ವನ ಬಂಧನ

ಸಾಂದರ್ಭಿಕ ಚಿತ್ರ | PC : Image by wirestock on Magnific
ಮೈಸೂರು : ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಬಾಳೆ ತೋಟವೊಂದರಲ್ಲಿ ಡ್ರಗ್ಸ್ ಜಾಲವನ್ನು ಕೇರಳಂ ಪೊಲೀಸರು ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿದ್ದಾರೆ.
ಕೇರಳಂನ ಧನೇಶ್ ಅಲಿಯಾಸ್ ಡ್ಯಾನಿ ಬಾಯಿ (31) ಬಂಧಿತ ವ್ಯಕ್ತಿ. ಈತ ಕೇರಳದ ಆಲಪ್ಪುಳ ಜಿಲ್ಲೆಯ ಹರಿಪಾಡ್ ನಿವಾಸಿಯಾಗಿದ್ದಾನೆ.
ಈತ ನಂಜನಗೂಡು ತಾಲ್ಲೂಕಿನಲ್ಲಿಕಳೆದ ಎರಡು ವರ್ಷಗಳ ಹಿಂದೆ ಎರಡು ಎಕರೆ ಜಮೀನನ್ನು ಲೀಸ್ ಗೆ ಪಡೆದು ಬಾಳೆ ತೋಟ ಮಾಡಿದ್ದ. ಇದೇ ಬಾಳೆ ತೋಟದಲ್ಲಿ ಬಾಳೆ ಗೊನೆಗಳಲ್ಲಿ ಡ್ರಗ್ಸ್ ಅಡಗಿಟ್ಟು ಕೇರಳ, ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಈತ ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ಮಾಹಿತಿಯನ್ನು ಪಡೆದ ಕೇರಳ ಪೊಲೀಸರು ಕೇರಳದ ಅಂಗಮಾಲಿಯಲ್ಲಿ ಬಂಧಿಸಿದ್ದಾರೆ. ಈತನನ್ನು ವಿಚಾರಣೆ ನಡೆಸಿದ ವೇಳೆ ನಂಜನಗೂಡು ತಾಲ್ಲೂಕಿನ ಜಮೀನಿನಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿರುವುದು ಪತ್ತೆಯಾಗಿದೆ.
ಇತ್ತೀಚೆಗೆ ಮೈಸೂರು ನಗರದಲ್ಲಿ ಮಹರಾಷ್ಟ್ರ ಪೊಲೀಸರು ಡ್ರಗ್ಸ್ ಜಾಲವನ್ನೇ ಪತ್ತೆಹಚ್ಚಿದ್ದರು. ಇದೀಗ ಕೇರಳ ಪೊಲೀಸರು ಪತ್ತೆ ಹಚ್ಚಿರುವುದು ಸ್ಥಳೀಯ ಪೊಲೀಸರು ಮತ್ತು ಗುಪ್ತಚರದ ಕರ್ತವ್ಯವನ್ನು ಪ್ರಶ್ನಿಸುವಂತಾಗಿದೆ.
ಗುಪ್ತಚರ ವೈಫಲ್ಯಕ್ಕೆ ಸಾಕ್ಷಿ:
ನಂಜನಗೂಡಿನ ಮಾದಕವಸ್ತು ದಂಧೆ ಪ್ರಕರಣ ಕರ್ನಾಟಕದ ಗುಪ್ತಚರ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕರ್ನಾಟಕದ ನೆಲದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂತಹ ಅಕ್ರಮ ಜಾಲವನ್ನು ನಮ್ಮ ರಾಜ್ಯದ ಪೊಲೀಸರು ಅಥವಾ ಸ್ಥಳೀಯ ಗುಪ್ತಚರ ಇಲಾಖೆ ಪತ್ತೆಹಚ್ಚುವ ಬದಲು ನೆರೆಯ ರಾಜ್ಯದ ಪೊಲೀಸರು ಪತ್ತೆಹಚ್ಚಿರುವುದು ಅತ್ಯಂತ ಆಘಾತಕಾರಿ ಸಂಗತಿಯಾಗಿದೆ. ಇದು ಕೇವಲ ಒಂದು ಪ್ರಕರಣಕ್ಕೆ ಸೀಮಿತವಾದ ವೈಫಲ್ಯವಲ್ಲ. ಇತ್ತೀಚಿನ ವರ್ಷಗಳಲ್ಲಿ ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಘಟಿತ ಮಾದಕವಸ್ತು ಜಾಲಗಳನ್ನು ಪತ್ತೆಹಚ್ಚಲು ಮಹಾರಾಷ್ಟ್ರ ಪೊಲೀಸರು ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ಮಧ್ಯಪ್ರವೇಶಿಸಬೇಕಾದ ಹಲವು ಸಂದರ್ಭಗಳು ಎದುರಾಗಿವೆ. ಇಂತಹ ಘಟನೆಗಳು ರಾಜ್ಯದ ಗುಪ್ತಚರ ವ್ಯವಸ್ಥೆಯ ಕಾರ್ಯಕ್ಷಮತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದು ತಿಳಿಸಿದ್ದಾರೆ.






