Mysuru | ಕುರಿಗಾಹಿಗಳ ಮೇಲಿನ ಗುಂಡಿನ ದಾಳಿ ಪ್ರಕರಣ; ಮೂವರು ಆರೋಪಿಗಳ ಬಂಧನ: ಎಸ್ಪಿ ಮಲ್ಲಿಕಾರ್ಜುನ

ಸಾಂದರ್ಭಿಕ ಚಿತ್ರ | PC : Image by wirestock on Magnific
ಮೈಸೂರು : ಹುಣಸೂರು ತಾಲೂಕಿನ ಗುರುಪುರ ಬಳಿ ಕುರಿಗಾಹಿಗಳ ಮೇಲೆ ನಡೆದಿದ್ದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ನಗರದ ಎಸ್ಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಮೋದ್, ಸುದೀಪ್ ಮತ್ತು ದೇವರಾಜ್ ಬಂಧಿತ ಆರೋಪಿಗಳು. ನ.6ರಂದು ಕುರಿಗಾಹಿಗಳಮೇಲೆ ನಡೆದ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆಗೆ ಎರಡು ತಂಡಗಳನ್ನು ರಚನೆ ಮಾಡಲಾಗಿತ್ತು. ಘಟನಾ ಸ್ಥಳದಲ್ಲಿ ದೊರೆತ ಮೊಬೈಲ್ ಹಾಗೂ ದ್ವಿಚಕ್ರ ವಾಹನದ ಆಧಾರದ ಮೇಲೆ ಮೂವರು ಆರೋಪಿಗಳ ಬಂಧಿಸಲಾಗಿದೆ ಎಂದರು.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು,ಬಂಧಿತರಿಂದ ರಾಮಕೃಷ್ಣ ಎಂಬವರಿಗೆ ಸೇರಿದ ಪರವಾನಿಗೆ ಹೊಂದಿದ ಬಂದೂಕು ಹಾಗೂ ಎರಡು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ರಾಮಕೃಷ್ಣ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.




