Mysuru | ಚಲಿಸುತ್ತಿದ್ದ ಬೈಕ್ ಟೈರ್ ಸ್ಫೋಟ: ಬಾಲಕಿ ಮೃತ್ಯು

ಮೈಸೂರು/ನಂಜನಗೂಡು : ಚಲಿಸುತ್ತಿದ್ದ ಬೈಕ್ ಟೈರ್ ಸ್ಪೋಟಗೊಂಡು ಸಂಭವಿಸಿದ ಅಪಘಾತದಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ಬಾಲಕಿ ಮೃತಪಟ್ಟಿರುವ ಘಟನೆ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ.
ಮಡುವಿನಹಳ್ಳಿ ಗ್ರಾಮದ ಮಹದೇವಸ್ವಾಮಿ ಮತ್ತು ಚಂದ್ರಮ್ಮ ಎಂಬುವರ ಪುತ್ರಿ ಪೂರ್ವಿಕ (16) ಮೃತಪಟ್ಟ ಬಾಲಕಿ. ಇಲ್ಲಿನ ಹೆಡಿಯಾಲ ಬೇಗೂರು ಮುಖ್ಯರಸ್ತೆಯ ಗಣೇಶಪುರ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮತ್ತೆ ಗ್ರಾಮಕ್ಕೆ ಮರಳುತ್ತಿರುವಾಗ ಗಣೇಶಪುರ ಗ್ರಾಮದ ಮುಖ್ಯ ರಸ್ತೆಯಲ್ಲಿ ದ್ವಿಚಕ್ರ ವಾಹನದ ಟೈರ್ ಸ್ಫೋಟವಾಗಿದೆ.
ಒಂದೇ ಬೈಕ್‌ನಲ್ಲಿ ಕುಟುಂಬದ ನಾಲ್ವರು ಸದಸ್ಯರು ತೆರಳುತ್ತಿದ್ದರು. ಇದರ ಪರಿಣಾಮ ನಾಲ್ಕು ಜನರ ಪೈಕಿ ಪೂರ್ವಿಕ ಮತ್ತು ತಾಯಿ ಚಂದ್ರಮ್ಮ ಗಂಭೀರ ಗಾಯಗೊಂಡು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಪೂರ್ವಿಕ ಸಾವನ್ನಪ್ಪಿದ್ದಾಳೆ.
ಮೃತ ಬಾಲಕಿಯ ತಾಯಿ ಚಂದ್ರಮ್ಮಗೆ ಗಂಭೀರ ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ದ್ವಿಚಕ್ರ ವಾಹನದಲ್ಲಿದ್ದ ತಂದೆ ಮಹದೇವಸ್ವಾಮಿ ಮತ್ತು ಮಗ ಪ್ರೀತಮ್ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ
ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಮೃತ ಬಾಲಕಿ ಪೂರ್ವಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗುವುದು ಎಂದು ಯಡಿಯಾಲ ಪೊಲೀಸರು ತಿಳಿಸಿದ್ದಾರೆ.






