ಮೈಸೂರು: ಪ್ರತಾಪ್ ಸಿಂಹ ವಿರುದ್ಧ FIR ದಾಖಲಿಸುವಂತೆ ಕಾಂಗ್ರೆಸ್ ದೂರು

ಮೈಸೂರು: ಟಿ.ನರಸೀಪುರದಲ್ಲಿ ಶುಕ್ರವಾರ ನಡೆದ ಗಣಪತಿ ವಿಸರ್ಜನೆ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ ಮಸೀದಿ ಎದುರು ಪ್ರಚೋದನಕಾರಿಯಾಗಿ ಸರ್ಕಾರ ಮತ್ತು ಇನ್ಸ್ ಪೆಕ್ಟರ್ ವಿರುದ್ಧ ಮಾತನಾಡಿದ್ದರೂ ಏಕೆ ಆತನ ಮೇಲೆ FIR ದಾಖಲಿಸಿಲ್ಲ ಎಂದು ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ನಿಯೋಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಪ್ರಶ್ನಿಸಿತು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ನೇತೃತ್ವದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ಸೇರಿದಂತೆ ಕಾಂಗ್ರೆಸ್ ನಿಯೋಗ ಶನಿವಾರ ಎಸ್ಪಿ ಕಚೇರಿ ಭೇಟಿ ನೀಡಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ತಕ್ಷಣ ಪ್ರಕರಣ ದಾಖಲಿಸುವಂತೆ ದೂರು ಸಲ್ಲಿಸಿದರು.
ಪ್ರತಾಪ್ ಸಿಂಹ ಸರ್ಕಾರ ಮತ್ತು ಇನ್ಸ್ ಪೆಕ್ಟರ್ ವಿರುದ್ಧ ಪ್ರಚೋದನಾಕಾರಿಯಾಗಿ ಮಾತನಾಡಿದರೂ ಆತನ ಮೇಲೆ FIR ದಾಖಲು ಮಾಡದೆ ಏಕೆ ಬಿಟ್ಟಿರಿ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಎಂ.ಲಕ್ಷ್ಮಣ್ ಅಸಮಾಧಾನ ವ್ಯಕ್ತಪಡಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಇದಿಯೋ ಬಿಜೆಪಿ ಪಕ್ಷ ಇದಿಯೋ ಗೊತ್ತಾಗುತ್ತಿಲ್ಲ. ನಮ್ಮ ಪಕ್ಷ ಅಧಿಕಾರದಲ್ಲಿದ್ದರೂ ಅಧಿಕಾರಿಗಳು ಮಾತ್ರ ತಮ್ಮ ನಡೆಯನ್ನು ಇನ್ನೂ ಬಲಾಯಿಸಿಕೊಂಡಿಲ್ಲ. ತಕ್ಷಣ ಆತನ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಕಾಂಗ್ರೆಸ್ ಪಕ್ಷದಿಂದ ದೊಡ್ಡ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ಮಾತನಾಡಿ, ಪ್ರತಾಪ್ ಸಿಂಹ ಪದೇ ಪದೇ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪೊಲೀಸರ ವಿರುದ್ಧ ಮಾತನಾಡಿದರೂ ಆತನ ಮೇಲೆ ಕ್ರಮ ಜರುಗಿಸಲು ಏಕೆ ಹಿಂಜರಿಯುತ್ತಿದ್ದೀರಿ. ಕೂಡಲೇ ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.
ನಿಯೋಗದಲ್ಲಿ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್, ವಕೀಲರಾದ ಕಾಂತರಾಜ್, ತಿಮ್ಮಯ್ಯ, ಕಾಂಗ್ರೆಸ್ ಮುಖಂಡ ಮಹದೇವ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ರಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚಂದನ್, ಮಾಧ್ಯಮ ವಕ್ತಾರ ಮಹೇಶ್ ಸೇರಿದಂತೆ ಹಲವರು ಇದ್ದರು.






