ಮೈಸೂರು | ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ
ನಾಳೆ ಅರಮನೆ ನಗರಿಯಲ್ಲಿ ವಿಜೃಂಭಣೆಯ ದಸರಾಗೆ ತೆರೆ

ಮೈಸೂರು : ನಾಡಹಬ್ಬ ದಸರಾ ಮಹೋತ್ಸವದ 2026ರ ಕಾರ್ಯಕ್ರಮಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಅ.20ರ ಆಯುಧ ಪೂಜೆ ಮತ್ತು 21ರ ವಿಜಯದಶಮಿ ಮೆರವಣಿಗೆಗೆ ಮೈಸೂರು ನಗರ ಸಜ್ಜಾಗಿದ್ದು ಕ್ಷಣಗಣನೆ ಆರಂಭವಾಗಿದೆ.
ತೀವ್ರ ಬರಗಾಲದ ನಡುವೆ ಅದ್ಧೂರಿ ದಸರಾ ಆಚರಣೆಗೆ ವಿರೋಧದ ನಡುವೆಯೂ ಅ. 11ರಂದು ದಸರಾ ಮಹೋತ್ಸವಕ್ಕೆ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಅ.21ರಂದು ಮಧ್ಯಾಹ್ನ 1:36ರಿಂದ 1:56ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಂದಿಧ್ವಜ ಪೂಜೆ ಸಲ್ಲಿಸಲಿದ್ದಾರೆ. ಸಂಜೆ 4:10ರಿಂದ 4:35ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಂಸದ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಸಕ ಟಿ.ಎಸ್. ಶ್ರೀವತ್ಸ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಮಂತ್ರಿಯಾಗಿ ಮೊದಲ ದಸರಾವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಡಿ.ಕೆ. ಶಿವಕುಮಾರ್ ಅವರು ಚಿನ್ನದ ಅಂಬಾರಿಯಲ್ಲಿ ವಿರಾಜಮಾನರಾದ ನಾಡಿನ ಅಧಿದೇವತೆ ಚಾಮುಂಡೇಶ್ವರಿ ವಿಗ್ರಹ ಮೂರ್ತಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಕೇರಳಂ ಮತ್ತು ತಮಿಳುನಾಡು, ತೆಲಂಗಾಣ ಮತ್ತು ಪಾಂಡಿಚೇರಿ ರಾಜ್ಯಗಳ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ತಾಲೀಮು ಪೂರ್ಣ: ಅರಮನೆ ಆವರಣದಲ್ಲಿ ಗಜಪಡೆ, ಅಶ್ವದಳ, ಪೊಲೀಸ್ ಇಲಾಖೆಯ ವಿವಿಧ ತುಕಡಿಗಳಿಂದ ಸೋಮವಾರ ಜಂಬೂ ಸವಾರಿಯ ಅಂತಿಮ ತಾಲೀಮು ನಡೆಸಲಾಯಿತು.ಅ.21ರಂದು ದಸರಾ ಜಂಬೂಸವಾರಿ ದಿನ ಚಿನ್ನದ ಅಂಬಾರಿ ಹೊತ್ತ ಪ್ರಶಾಂತ ಬರುವ ಮಾರ್ಗ, ಪುಷ್ಪಾರ್ಚನೆ ಮಾಡುವ ಸ್ಥಳ, ಆನೆಗಳ ತಂಡದ ಮುಂದೆ ಸಂಚರಿಸಲಿರುವ ಅಶ್ವರೋಹಿದಳ, ಪಥಸಂಚಲನದಲ್ಲಿ ಪಾಲ್ಗೊಳ್ಳುವ, ಪೊಲೀಸ್ ಬ್ಯಾಂಡ್ ಯಾವ ಕ್ರಮಾಂಕದಲ್ಲಿ ಸಾಗಬೇಕೆಂಬುದನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ತಾಲೀಮು ಯಶಸ್ವಿಯಾಗಿ ಜರುಗಿತು.
ಸೇನಾತುಕಡಿಗಳ ಸ್ತಬ್ಧಚಿತ್ರ
ಇದೇ ಪ್ರಥಮ ಬಾರಿಗೆ ಭಾರತೀಯ ಮೂರು ಸೇನಾ ಪಡೆಗಳಾದ ಭೂ ಸೇನೆ, ವಾಯು ಸೇನೆ ಮತ್ತು ಜಲಸೇನೆಯ ಸ್ತಬ್ಧಚಿತ್ರಗಳು ಭಾಗವಹಿಸಲಿವೆ. ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆಯ ಅಂದವನ್ನು ಹೆಚ್ಚಿಸಲಿವೆ.
ಅಂಬಾರಿ ಹೊರಲು ಪ್ರಶಾಂತ ರೆಡಿ
18 ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿರುವ ಪ್ರಶಾಂತ ಆನೆಯು 2026ರ ವಿಜಯದಶಮಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಲಿದೆ.ಪ್ರಶಾಂತ ಆನೆಯು ತಾಲೀಮನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಕಳೆದ ಬಾರಿ ಅಂಬಾರಿ ಹೊತ್ತು ಸಾಗಿದ್ದ ಅಭಿಮನ್ಯು ನಿಶಾನೆ ಆನೆ, ಗೋಪಿ - ನೌಪತ್ ಆನೆ, ಸಾಲಾನೆ 1 - ಮಹೇಂದ್ರ, ಲಕ್ಷ್ಮೀ ಸಾಲಾನೆ 2ನೇ ತಂಡ - ಶ್ರೀರಾಮ, ಚೈತ್ರ, ಸುಗ್ರೀವ, ಸಾಲಾನೆ 3ನೇ ತಂಡ - ಶ್ರೀಕಂಠ, ಏಕಲವ್ಯ, ಕುಮ್ಕಿ ಆನೆಗಳು - ಕಾವೇರಿ, ರೂಪಾ ಮೆರವಣಿಗೆಯಲ್ಲಿ ಸಾಗಲಿವೆ.
ದಸರಾ ದೀಪಾಲಂಕಾರ 10 ದಿನ ವಿಸ್ತರಣೆ: ಸಿಎಂ
ದಸರಾ ದೀಪಾಲಂಕಾರವನ್ನು 10 ದಿನಗಳ ಕಾಲ ವಿಸ್ತರಿಸಲು ತೀರ್ಮಾನಿಸಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಇಂದು ಅರಮನೆಯಲ್ಲಿ ಆಯುಧ ಪೂಜೆ
ಅ.20ರಂದು ಅರಮನೆಯಲ್ಲಿ ರಾಜವಂಶಸ್ಥರು ಆಯುಧ ಪೂಜೆ ನಡೆಸಲಿದ್ದಾರೆ. ಬೆಳಗ್ಗೆ 6 ಗಂಟೆಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪೂಜಾ ಕಾರ್ಯಗಳನ್ನು ನಡೆಸಲಿದ್ದಾರೆ.






