ಧರ್ಮಸ್ಥಳದಲ್ಲಿ ಸರಣಿ ಹತ್ಯೆ ಆರೋಪ: ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿ ಮೈಸೂರಿನಲ್ಲಿ ದಸಂಸ ಧರಣಿ

ಮೈಸೂರು: ದ.ಕ.ಜಿಲ್ಲೆಯ ಧರ್ಮಸ್ಥಳ ಮತ್ತು ಇದರ ಸುತ್ತ ಮುತ್ತ ನಡೆದಿರುವ ಹಲವಾರು ಅತ್ಯಾಚಾರ, ಹತ್ಯೆ ಪ್ರಕರಣಗಳ ಬಗ್ಗೆ ಮಾಹಿತಿ ಇರುವುದಾಗಿ ವ್ಯಕ್ತಿಯೋರ್ವ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿರುವುದನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಧರಣಿ ನಡೆಯಿತು.
ನಗರದ ಪುರಭವನದ ಅಂಬೇಡ್ಕರ್ ಪ್ರತಿಮೆ ಎದುರು ಮಂಗಳವಾರ ಜಮಾಯಿಸಿದ ಧರಣಿ ನಿರತರು, ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸಬೇಕು ಹಾಗೂ ಅತ್ಯಾಚಾರ, ಕೊಲೆ ಪ್ರಕರಣಗಳ ಬಗ್ಗೆ ದೂರು ನೀಡಿದ ವ್ಯಕ್ತಿ ಮತ್ತು ಆತನ ಕುಟುಂಬಕ್ಕೆ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಸಂಘಟನಾ ಸಂಚಾಲಕ ಕೆ.ವಿ.ದೇವೇಂದ್ರ, ಕಿರಂಗೂರು ಸ್ವಾಮಿ, ಹಾರೋಹಳ್ಳಿ ನಟರಾಜ್, ಎಡದೊರೆ ಮಹದೇವಯ್ಯ, ಮೈಸೂರು ವಿವಿ ಸಂಶೋಧನಾ ವಿದ್ಯಾರ್ಥಿಗಳಾದ ರೋಜ, ಪ್ರದೀಪ್ ಮುಮ್ಮಡಿ, ಧೀರಜ್, ನವೀನ್ ಅಳಗಂಚಿ, ಹನುಮನಪುರ ಪುಟ್ಟಣ್ಣ, ಶಿವಮ್ಮ, ಪುಟ್ಟಸಿದ್ಧಮ್ಮ, ರತ್ನಮ್ಮ, ಸಿದ್ಧಮ್ಮ, ಲಕ್ಷ್ಮಮ್ಮ, ರವಿಕುಮಾರ್ ಭಾಗವಹಿಸಿದ್ದರು.





