Mysuru | ಫೈನಾನ್ಶಿಯರ್ ಅಪಹರಿಸಿ 1 ಕೋಟಿ ರೂ. ಬೇಡಿಕೆ : ನಾಲ್ವರ ಬಂಧನ

ಸಾಂದರ್ಭಿಕ ಚಿತ್ರ
ಮೈಸೂರು : ಫೈನಾನ್ಶಿಯರ್ ಒಬ್ಬರನ್ನು ಅಪಹರಿಸಿ ಒಂದು ಕೋಟಿ ರೂ.ಹಣಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರು ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಮೈಸೂರಿನ ವಿಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಂತೋಷ್ ಎಚ್.ಎಂ., ಅಭಿಷೇಕ್ ಎಚ್.ಎಸ್., ಪ್ರಜ್ವಲ್ ಆರ್ ಹಾಗೂ ದರ್ಶನ್ ಬಿ.ಎನ್ ಬಂಧಿತ ಅಪಹರಣಕಾರರಾಗಿದ್ದಾರೆ. ಫೈನಾನ್ಶಿಯರ್ ವಿಜಯನಗರ ನಿವಾಸಿ ಲೋಕೇಶ್ ಎಂಬವರನ್ನು ಪೊಲೀಸರು ರಕ್ಷಿಸಿದ್ದಾರೆ.
ಡಿ.6 ಶನಿವಾರ ರಾತ್ರಿ 8.15 ಗಂಟೆ ಸಮಯದಲ್ಲಿ ವಿಜಯನಗರ 3ನೇ ಹಂತ ಹೆರಿಟೇಜ್ ಕ್ಲಬ್ ನಿಂದ ಮನೆಗೆ ಹೋಗಲು ಹೊರಗೆ ಬಂದ ಲೋಕೇಶ್ ಅವರ ಮೇಲೆ ಅಟ್ಯಾಕ್ ಮಾಡಿದ ನಾಲ್ಕು ಜನರ ಗುಂಪು ಕಣ್ಣಿಗೆ ಖಾರದ ಪುಡಿ ಎರಚಿ ಬಲವಂತವಾಗಿ ಒಂದು ಟಾಟಾ ಸುಮೋ ವಾಹನದಲ್ಲಿ ಎತ್ತಿ ಹಾಕಿಕೊಂಡು ಅಪಹರಣ ಮಾಡಿದ್ದರು. ಲೋಕೇಶ್ ನನ್ನು ಒತ್ತೆಯಾಳಾಗಿರಿಸಿಕೊಂಡು ಒಂದು ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಕಿಡ್ನಾಪ್ ಆದ ಲೋಕೇಶ್ ಅವರ ಪತ್ನಿ ನಯನಾ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು
ಕೂಡಲೇ ಕಾರ್ಯ ಪ್ರವೃತ್ತರಾದ ವಿಜಯನಗರ ಠಾಣೆ ಪೊಲೀಸರು ಕೆಲವೇ ಘಂಟೆಗಳಲ್ಲಿ ಆರೋಪಿಗಳನ್ನು ಕೆ.ಆರ್. ನಗರದ ಹಂಪಾಪುರ ಬಳಿ ವಶಕ್ಕೆ ಪಡೆದು ಲೋಕೇಶ್ರನ್ನು ರಕ್ಷಣೆ ಮಾಡಿದ್ದಾರೆ.ಲೋಕೇಶ್ ಕುಟುಂಬ ದಿಂದ ಹಣ ಪಡೆಯಲು ಹೋಗಿದ್ದ ಮತ್ತೊಬ್ಬ ಆರೋಪಿ ಪ್ರೀತಮ್ಗಾಗಿ ಹುಡುಕಾಟ ಮುಂದುವರಿಸಿದ್ದಾರೆ.
ಪತ್ತೆ ಕಾರ್ಯಾಚರಣೆಯಲ್ಲಿ ವಿಜಯನಗರ ಎಸಿಪಿ ರವಿ ಪ್ರಸಾದ್, ಪೊಲೀಸ್ ಇನ್ಸ್ಪೆಕ್ಟರ್ ಎಸ್.ಡಿ.ಸುರೇಶ್ ಕುಮಾರ್, ಸಬ್ ಇನ್ಸ್ಪೆಕ್ಟರ್ಗಳಾದ ಜೈ ಕೀರ್ತಿ ಎಂ, ಆನಂದ್ ಹಾಗೂ ಸಿಬ್ಬಂದಿ ಶಂಕರ್, ವೆಂಕಟೇಶ್, ಸುನೀಲ್, ಗಂಗಾಧರ್, ಲಿಖಿತ್, ಮಂಜುನಾಥ್, ಲೋಕೇಶ್, ಚಾಲಕ ಗಿರೀಶ್ ಭಾಗವಹಿಸಿದ್ದರು. ಕಾರ್ಯಾಚರಣೆ ನಡೆಸಿದ ತಂಡವನ್ನು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಉಪ ಪೊಲೀಸ್ ಆಯುಕ್ತರುಗಳಾದ ಬಿಂದುಮಣಿ ಹಾಗೂ ಸುಂದರರಾಜ್ ಅಭಿನಂದಿಸಿದ್ದಾರೆ.







