Mysuru | ಲಾರಿ–ಬಸ್ ಮುಖಾಮುಖಿ ಢಿಕ್ಕಿ : ನಾಲ್ವರು ಮೃತ್ಯು, 20ಕ್ಕೂ ಹೆಚ್ಚು ಮಂದಿಗೆ ಗಾಯ

ಪಿರಿಯಾಪಟ್ಟಣ/ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಿರನಹಳ್ಳಿ ಗೇಟ್ ಬಳಿ ಶುಕ್ರವಾರ ಬೆಳಗಿನ ಜಾವ ಲಾರಿ ಮತ್ತು ಸ್ಲೀಪರ್ ಕೋಚ್ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಐವರ ಸ್ಥಿತಿ ಚಿಂತಾಜನಕವಾಗಿದೆ. 20ಕ್ಕೂ ಹೆಚ್ಚು ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ.
ಮೃತರನ್ನು ಬಸ್ ಚಾಲಕ ಸುನೀಲ್, ಕ್ಲೀನರ್ ಸದೇಶ್ ಹಾಗೂ ಕೇರಳದ ಅಫ್ತಾಬ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.
ಬೆಂಗಳೂರಿನಿಂದ ಕೇರಳದ ಕ್ಯಾಲಿಕಟ್ಗೆ ಕಾವೇರಿ ಸ್ಲೀಪರ್ ಕೋಚ್ ಬಸ್ ತೆರಳುತ್ತಿತ್ತು. ಇದೇ ವೇಳೆ ಪಿರಿಯಾಪಟ್ಟಣದಿಂದ ಮೈಸೂರಿನತ್ತ ಬರುತ್ತಿದ್ದ ಲಾರಿ ಬಸ್ಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಐವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿದೆ. ಬಸ್ನಲ್ಲಿ 36 ಮಂದಿ ಪ್ರಯಾಣಿಸುತ್ತಿದ್ದು, ಅವರೆಲ್ಲರೂ ಕೇರಳದವರು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಹುಣಸೂರು ಉಪವಿಭಾಗದ ಡಿವೈಎಸ್ಪಿ ರವಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.




