Mysuru | ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಪ್ರತ್ಯೇಕ ಪ್ರಕರಣ : ಐವರ ಬಂಧನ

ಸಾಂದರ್ಭಿಕ ಚಿತ್ರ | PC : Gemini AI
ಮೈಸೂರು, ಮೇ 8: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರನ್ನು ಬಂಧಿಸಿ 1 ಲ್ಯಾಪ್ ಟಾಪ್ ಹಾಗೂ 3 ಮೊಬೈಲ್ಗಳನ್ನು ಹೆಬ್ಬಾಳ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ನಾಯ್ಡುನಗರದ ಪ್ರದೀಪ್(39) ಮತ್ತು ಪ್ರಫುಲ್ (21) ಎಂದು ಗುರುತಿಸಲಾಗಿದೆ.
ನಗರದ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಹೋಟೆಲ್ ಒಂದರ 3 ನೇ ಮಹಡಿಯ ಮೇಲೆ ದಾಳಿ ನಡಸಿದಾಗ ಐಪಿಎಲ್ಕ್ರಿಕೆಟ್ ಪಂದ್ಯಾವಳಿಗಳಿಂದ ಆಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕಾನೂನು ಬಾಹಿರವಾಗಿ ಸಾರ್ವಜನಿಕರಿಂದ ಆನ್ಲೈನ್ ಮೂಲಕ ಹಣವನ್ನು ಪಣವಾಗಿರಿಸಿಕೊಂಡು ಮೊಬೈಲ್ ಮತ್ತು ಲ್ಯಾಪ್ ಟಾಪ್ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ-2: ನಗರದ ದೇವರಾಜ ಪೊಲೀಸರು ಐಪಿಎಲ್ ಬೆಟ್ಟಿಂಗ್ ಆಡುತ್ತಿದ್ದ ಮೂವರನ್ನು ಬಂಧಿಸಿ 1 ಕಾರು, 15,900 ರೂ. ನಗದು ಮತ್ತು 3 ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಮಂಡಿಮೊಹಲ್ಲಾದ ಕುಮಾರ್ (33), ಇಲವಾದ ಪಿ.ವಿ.ವಿನೋದ್ (32) ಮತ್ತು ಪಡುವಾರಹಳ್ಳಿಯ ಲಿಖಿತ್ ಕುಮಾರ್ (27) ಎಂದು ಗುರುತಿಸಲಾಗಿದೆ.
ಮೇ 7ರಂದು ಟೌನ್ ಹಾಲ್ ಹಿಂಭಾಗದಲ್ಲಿರುವ ಪಾರ್ಕಿಂಗ್ನಲ್ಲಿ ಕಾರಿನೊಳಗೆ ಕುಳಿತು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳಿಂದ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕಾನೂನು ಬಾಹಿರವಾಗಿ ಸಾರ್ವಜನಿಕರಿಂದ ಆನ್ ಲೈನ್, ಆಫ್ ಲೈನ್ ಮೂಲಕ ಹಣವನ್ನು ಪಣವಾಗಿರಿಸಿಕೊಂಡು ಮೊಬೈಲ್ನಲ್ಲೆ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದು ಕ್ರಿಕೆಟ್ ಬೆಟ್ಟಿಂಗ್ಗೆ ಬಳಕೆ ಮಾಡುತ್ತಿದ್ದ 3 ಮೊಬೈಲ್ ಫೋನ್ಗಳು, 15,900ರೂ. ನಗದು ಹಣ ಮತ್ತು 1 ಕಾರನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.






