ನಂಜನಗೂಡು: ಮನೆ ಬಳಿಯಲ್ಲೇ ಆಟವಾಡುತ್ತಿದ್ದ ಮೂರು ಹೆಣ್ಣು ಮಕ್ಕಳು ನಾಪತ್ತೆ; ಪ್ರಕರಣ ದಾಖಲು

ಮೈಸೂರು: ಜಿಲ್ಲೆಯ ನಂಜನಗೂಡು ನಗರದ ಅಶೋಕಪುರಂನ ಮೂವರು ಹೆಣ್ಣು ಮಕ್ಕಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಅಶೋಕಪುರಂ ನಿವಾಸಿ ಸಿದ್ದರಾಜು ಅವರ ಮಗಳು ಲಾವಣ್ಯ(11), ಮುದ್ದೇಶ್ ಅವರ ಮಗಳು ಅಮೂಲ್ಯ (10), ಹಾಗೂ ಯಶು (10) ನಾಪತ್ತೆಯಾಗಿರುವ ಮಕ್ಕಳು.
ರವಿವಾರ ಮಧ್ಯಾಹ್ನ ಮನೆ ಬಳಿಯೇ ಆಟವಾಡುತ್ತಿದ್ದ ಮೂವರು ಸಂಜೆಯಾದರು ಮನೆಗೆ ವಾಪಸ್ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ಎಲ್ಲೆಡೆ ಹುಡುಕಿದರೂ ಮಕ್ಕಳ ಸುಳಿವು ಮಾತ್ರ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ಆತಂಕಕ್ಕೊಳಗಾದ ಪೋಷಕರು ನಂಜನಗೂಡು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ತಂಡ ರಚನೆ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇನ್ಸ್ ಪೆಕ್ಟರ್ ರವೀಂದ್ರ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಿ ಮಕ್ಕಳ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಈಗಾಗಲೇ ಮಕ್ಕಳು ಮೈಸೂರಿನಿಂದ ಹಾಸನಕ್ಕೆ ಹೋಗಿ ಅಲ್ಲಿಂದ ಸುಬ್ರಮಣ್ಯ ಬಸ್ ಹತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಪೊಲೀಸ್ ತಂಡ ಈಗಾಗಲೇ ಸುಬ್ರಮಣ್ಯ ತಲುಪಿದ್ದಾರೆ ಎಂದು ತಿಳಿದು ಬಂದಿದೆ.