ನಂಜನಗೂಡು: ಅಂಬೇಡ್ಕರ್ ನಾಮಫಲಕ ಹರಿದು ಅಪಮಾನ; ಗ್ರಾಮಸ್ಥರ ಆಕ್ರೋಶ, ಪ್ರತಿಭಟನೆ

ಮೈಸೂರು,ಮೇ. 15: ಅಂಬೇಡ್ಕರ್ ಭಾವಚಿತ್ರ ಇರುವ ನಾಮಫಲಕವನ್ನು ಹರಿದು ಹಾಕಿ ಸಗಣಿ ಎರಚಿ ಅವಮಾನಿಸಿರುವ ಘಟನೆ ನಂಜನಗೂಡು ತಾಲ್ಲೂಕು ಹಲ್ಲರೆ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಹಲ್ಲರೆ ಗ್ರಾಮದಲ್ಲಿ ದಲಿತರು ವಾಸಮಾಡುವ ಮುಖ್ಯ ರಸ್ತೆಗೆ ಅಂಬೇಡ್ಕರ್ ಭಾವಚಿತ್ರದ ನಾಮಫಲಕ ಅಳವಡಿಸಲಾಗಿತ್ತು. ಬುಧವಾರ ರಾತ್ರಿ ಕಿಡಿಗೇಡಿಗಳು ಅಂಬೇಡ್ಕರ್ ನಾಮಫಲದಲ್ಲಿದ್ದ ಭಾವಚಿತ್ರ ಹರಿದು ವಿರೂಪಗೊಳಿಸಿ, ಸಗಣಿ ಎರಚಿ ವಿಕೃತಿ ಮೆರೆದಿದ್ದಾರೆ.
ಹಲ್ಲರೆ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಪರಿಶಿಷ್ಟ ಜನಾಂಗದವರು ಪ್ರತಿಭಟನೆ ನಡೆಸಿ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಈ ಹಿಂದೆ ಇದೇ ಹಲ್ಲರೆ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರು ರಸ್ತೆಗೆ ಅಂಬೇಡ್ಕರ್ ನಾಮಫಲಕ ಅಳವಡಿಸುವ ವೇಳೆ ಇದೇ ಗ್ರಾಮದ ಪರಿಶಿಷ್ಟ ಪಂಗಡ (ನಾಯಕ) ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದರಿಂದ ಘರ್ಷಣೆ ಉಂಟಾಗಿತ್ತು. ಈ ಸಮಸ್ಯೆ ಬಗೆಹರಿಯುವ ಮುನ್ನವೇ ಈಗ ಮತ್ತೆ ಅಂಬೇಡ್ಕರ್ ಭಾವಚಿತ್ರ ನಾಮಫಲಕ ಹರಿದು ಹಾಕಿ ಅಪಮಾನಿಸಿರುವುದು ಪರಿಶಿಷ್ಟ ಜಾತಿಯವರನ್ನು ಮತ್ತಷ್ಟು ಕೆರಳಿಸಿದಂತಾಗಿದೆ.
ಈ ಸಂಬಂಧ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಈಗಾಗಲೇ ಸಿಸಿ ಟಿವಿ ಫೋಟೇಜ್ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಮೈಸೂರು ಜಿಲ್ಲೆಯ ವಾಜಮಂಗಲ ಮತ್ತು ಸಿಂಧುವಳ್ಳಿ ಗ್ರಾಮಗಳಲ್ಲೂ ಅಂಬೇಡ್ಕರ್ ಭಾವಚಿತ್ರ ವಿರೂಪಗೊಳಿಸಿ ಅಪಮಾನಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಿದ್ದರೆ ಇಂತಹ ಘಟನೆ ಮರುಕಳಿಸುತ್ತಿರಲಿಲ್ಲ. ಪರಿಶಿಷ್ಟ ಜಾತಿಯವರಾದ ನಾವುಗಳು ದಿನನಿತ್ಯ ಅವಮಾನಕ್ಕೆ ಒಳಗಾಗುತ್ತಿದ್ದೇವೆ ಹೊರತು ನಮಗೆ ಸೂಕ್ತ ನ್ಯಾಯ ಸಿಗುತ್ತಿಲ್ಲ.
- ಮಲ್ಲಹಳ್ಳಿ ನಾರಾಯಣ, ಜಿಲ್ಲಾ ಸಂಚಾಲಕ, ದಸಂಸ.
ಈ ಹಿಂದೆ ಹಲ್ಲರೆ ಗ್ರಾಮದಲ್ಲಿ ನಡೆದ ಘಟನೆಯನ್ನು ಸಂಪೂರ್ಣವಾಗಿ ಇತ್ಯರ್ಥ ಮಾಡಿದ್ದರೆ ಈ ಘಟನೆ ಮರುಕಳಿಸುತ್ತಿರಲಿಲ್ಲ. ಪೊಲೀಸ್ ಮತ್ತು ತಾಲ್ಲೂಕು ಆಡಳಿತದ ವೈಫಲ್ಯದಿಂದ ರಾಷ್ಟ್ರ ನಾಯಕ ಅಂಬೇಡ್ಕರ್ ಅವರಿಗೆ ಮತ್ತೆ ಅಪಮಾನ ಮಾಡಲಾಗಿದೆ. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರು ನಿರ್ಧಾಕ್ಷ್ಯೀಣವಾಗಿ ಪೊಲೀಸರು ಬಂಧಿಸಬೇಕು. ಈ ಘಟನೆಗೆ ಕಾರಣರಾದವರ ಮೇಲೆ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಬೇಕು.
-ಮಂಜು ಶಂಕರಪುರ, ದಸಂಸ ವಿಭಾಗೀಯ ಸಂಚಾಲಕ, ಮೈಸೂರು.







