ನಂಜನಗೂಡು | ದಲಿತ ಸಮುದಾಯದ ಮೇಲೆ ಹಲ್ಲೆ ಪ್ರಕರಣ : 39 ಮಂದಿಯ ಬಂಧನ

ಮೈಸೂರು: ನಂಜನಗೂಡು ತಾಲ್ಲೂಕು ಹಲ್ಲರೆ ಗ್ರಾಮದಲ್ಲಿ ದಲಿತ ಸಮುದಾಯದವರ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ನಡೆಸಿದ್ದ ನಾಯಕ ಸಮುದಾಯದ 39 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಹಲ್ಲರೆ ಗ್ರಾಮದ ದಲಿತ ಸಮುದಾಯದವರು ರಸ್ತೆ ಮಾರ್ಗಕ್ಕೆ ನಾಮಫಲಕ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಸಮುದಾಯದವರ ಮಧ್ಯೆ ಸೋಮವಾರ ರಾತ್ರಿ ಗಲಾಟೆ ನಡೆದಿತ್ತು. ದಲಿತ ಸಮುದಾಯದ 20 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿತ್ತು ಎಂದು ತಿಳಿದು ಬಂದಿತ್ತು.
ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸೂಚನೆ ಮೇರೆಗೆ ಕಾರ್ಯೊಪ್ರವೃತ್ತದರಾದ ಪೊಲೀಸರು ರಾತ್ರೋರಾತ್ರಿ ನಾಯಕ ಸಮುದಾಯದ 39 ಮಂದಿಯನ್ನು ಬಂಧಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ನಂಜನಗೂಡು ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಲಾಯಿತು. ನ್ಯಾಯಧೀಶರು ಎಲ್ಲಾ ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂಧಿದೆ.
ಶಾಸಕ ದರ್ಶನ್ ಧೃವನಾರಾಯಣ ಭೇಟಿ: ಹಲ್ಲರೆ ಗ್ರಾಮಕ್ಕೆ ಶಾಸಕ ದರ್ಶನ್ ಧೃವನಾರಾಯಣ ಭೇಟಿ ನೀಡಿ ಗ್ರಾಮಸ್ಥರಿಗೆ ಸಾಂತ್ವಾನ ಹೇಳಿದರು.
ಹಲ್ಲೆಗೊಳಗಾದ ದಲಿತ ಸಮುದಾಯದ ಬೀದಿಗಳಲ್ಲಿ ಸಂಚರಿಸಿ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿದರು. ನಂತರ ದಾಳಿಗೊಳಗಾದ ಮನೆಗಳಿಗೆ ತೆರಳಿ ಕುಟುಂಬಗಳಿಗೆ ಧೈರ್ಯ ತುಂಬಿದರು. ಬಳಿಕ ನಾಯಕ ಸಮುದಾಯದ ಬೀದಿಗೂ ತೆರಳಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.
ಎರಡು ಸಮುದಾಯದ ಮುಖಂಡರುಗಳೊಂದಿಗೆ ಸಮಾಲೋಚನೆ ನಡೆಸಿ ಗ್ರಾಮದಲ್ಲಿ ಶಾಂತಿ ಕಾಪಾಡಿಕೊಳ್ಳಿ ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಬೇಡಿ. ನಿಮ್ಮ ಎಲ್ಲರ ರಕ್ಷಣೆಗೆ ಸರಕಾರ ಇದೆ ಎಂದು ಹೇಳಿದರು.







