ಮುಡಾ ಪ್ರಕರಣದಲ್ಲಿ ಸಮರ್ಪಕ ತನಿಖೆ ನಡೆಸಿಲ್ಲ; ಕೇಂದ್ರ ಜಾಗೃತಿ ಆಯೋಗಕ್ಕೆ ಸ್ನೇಹಮಯಿ ಕೃಷ್ಣ ದೂರು

ಸ್ನೇಹಮಯಿ ಕೃಷ್ಣ
ಮೈಸೂರು: ಮುಡಾ ಪ್ರಕರಣದ ತನಿಖೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಮರ್ಪಕ ತನಿಖೆ ನಡೆಸಿಲ್ಲ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಿಎಂ ವಿರುದ್ಧ ದೂರು ಸಲ್ಲಿಸಿದ್ದ ಸ್ನೇಹಮಯಿ ಕೃಷ್ಣ ಕೇಂದ್ರ ಜಾಗೃತಿ ಆಯೋಗದ ಆಯುಕ್ತರಿಗೆ ಅಂಚೆ ಮೂಲಕ ದೂರು ಸಲ್ಲಿಸಿದ್ದಾರೆ.
ಐಪಿಎಸ್ ಅಧಿಕಾರಿಗಳಾದ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೀಶ್ ಕರ್ಬೀಕ, ಪೊಲೀಸ್ ಮಹಾನಿರೀಕ್ಷಕ ಸುಬ್ರಹ್ಮಣೇಶ್ವರ ರಾವ್, ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧದ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸುಳ್ಳು ತನಿಖಾ ವರದಿ ಸಲ್ಲಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದ್ದಾರೆ.
ಪ್ರಕರಣದ ತನಿಖೆಯ ಉಸ್ತುವಾರಿ ಹೊತ್ತಿದ್ದ ಈ ಮೂವರು ಅಧಿಕಾರಿಗಳು ಪ್ರಭಾವಕ್ಕೆ ಒಳಗಾಗಿ ಸೂಕ್ತವಾಗಿ ತನಿಖೆ ನಡೆಸಿಲ್ಲ. ಬೇಕಾದಂತೆ ವರದಿ ಸಿದ್ಧಪಡಿಸಿ ಕರ್ತವ್ಯ ಲೋಪ ಎಸಗಿದ್ದಾರೆ. ಮೂವರನ್ನು ವಿಚಾರಣೆಗೆ ಒಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಕೋರಿದ್ದಾರೆ.