ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಹೇಳಿಕೆ ನೀಡಿರುವ ವಿಜಯ್ ಶಾನನ್ನು ಜೈಲಿಗೆ ಕಳುಹಿಸಿ : ಎಂ.ಲಕ್ಷ್ಮಣ್ ಆಗ್ರಹ

ಮೈಸೂರು : ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಹೇಳಿಕೆ ನೀಡಿರುವ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಿ ಜೈಲಿಗೆ ಕಳುಹಿಸಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ ಹೆಣ್ಣುಮಗಳು, ಸೇನಾ ಮುಖ್ಯಸ್ಥೆಯ ವಿರುದ್ಧ ಬಿಜೆಪಿ ಪಕ್ಷದ ಸಚಿವ ಮಾತನಾಡಿದ್ದರೂ ಆ ಪಕ್ಷದ ಯಾವೊಬ್ಬ ನಾಯಕರು ಖಂಡಿಸಿಲ್ಲ, ಇದು ಬಿಜೆಪಿಯವರ ಮನಸ್ಥಿತಿ ಏನು ಎಂಬುದನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
ಇಂತಹ ಹೇಳಿಕೆಯನ್ನು ವಿರೋಧ ಪಕ್ಷದವರು ಯಾರಾದರೂ ನೀಡಿದ್ದರೆ ದೇಶದ್ರೋಹದ ಪ್ರಕರಣ ದಾಖಲಿಸಿ ಬಂಧಿಸುವ ಕೆಲಸ ಮಾಡುತ್ತಿದ್ದರು. ಆದರೆ ಈಗ ಒಂದೇ ಒಂದು ಮಾತನಾಡದೆ ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು.
ಅಂಬಾನಿ, ಅದಾನಿಗಾಗಿ ಕದನ ವಿರಾಮ: ಪಾಕಿಸ್ತಾನವನ್ನು ಸೆದೆ ಬಡಿದು ಪಿಒಕೆ ತನ್ನ ವಶಕ್ಕೆ ಪಡೆಯಬಹುದಾಗಿದ್ದಂತಹ ಅವಕಾಶವನ್ನು ಕೇವಲ ಇಬ್ಬರು ವ್ಯಕ್ತಿಗಳಾದ ಅದಾನಿ, ಅಂಬಾನಿ ಅವರ ವ್ಯಾಪಾರಕ್ಕಾಗಿ ಕದನ ವಿರಾಮಗೊಳಿಸುವ ಮೂಲಕ ದೇಶದ ಗೌರವವನ್ನು ಪ್ರಧಾನಿ ನರೇಂದ್ರ ಮೋದಿ ಮಣ್ಣು ಪಾಲು ಮಾಡಿದರು ಎಂದು ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಮಾಧ್ಯಮ ವಕ್ತಾರ ಕೆ.ಮಹೇಶ್, ಸೇವಾದಳದ ಗಿರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







